ದೇಶ

ನ್ಯಾಯಾಧೀಶರ ವಿರುದ್ಧ ನಿಂದನಾತ್ಮಕ ಟ್ವೀಟ್‌: ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಬೇಷರತ್‌ ಕ್ಷಮೆಯಾಚನೆ; ಪ್ರಕರಣ ವಜಾ

Srinivasamurthy VN

ಮುಂಬೈ: ಭೀಮಾ ಕೋರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟಿಸ್‌ ಎಸ್‌ ಮುರಳೀಧರ್‌ ಕುರಿತಂತೆ ಟ್ವಿಟ್ ಮಾಡಿದ್ದ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

ಜಸ್ಟಿಸ್‌ ಎಸ್‌ ಮುರಳೀಧರ್‌ ಕುರಿತಂತೆ ಟ್ವಿಟರ್‌ನಲ್ಲಿ 2018 ರಲ್ಲಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟಿನ ಮುಂದೆ ಬೇಷರತ್‌ ಕ್ಷಮೆಯಾಚಿಸಿ ತಮ್ಮ ಹೇಳಿಕೆಗೆ ಇಂದು ವಿಷಾದ ಸೂಚಿಸಿದ ಚಿತ್ರ ನಿರ್ಮಾಪಕ ವಿವೇಕ್‌ ಅಗ್ನಿಹೋತ್ರಿ ಅವರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ.

ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿಯೇ ಅಗ್ನಿಹೋತ್ರಿ ಬೇಷರತ್‌ ಕ್ಷಮೆಯಾಚಿಸಿದ್ದರೂ, ನ್ಯಾಯಾಲಯದ ಮುಂದೆ ಹಾಜರಾಗಿ ಖುದ್ದಾಗಿ ವಿಷಾದ ವ್ಯಕ್ತಪಡಿಸಬೇಕೆಂದು ನ್ಯಾಯಾಲಯ ಸೂಚಿಸಿತ್ತು. ನಿರ್ದಿಷ್ಟ ಟ್ವೀಟ್‌ ಅನ್ನು ತೆಗೆದುಹಾಕಿರುವುದಾಗಿ ಅಗ್ನಿಹೋತ್ರಿ ಈ ಹಿಂದೆ ನ್ಯಾಯಾಲಯಕ್ಕೆ ಹೇಳಿದ್ದರೂ ವಾಸ್ತವವಾಗಿ ಈ ಟ್ವೀಟ್‌ ಅನ್ನು ಟ್ವಿಟರ್‌ ತೆಗೆದುಹಾಕಿತ್ತೆಂಬುದನ್ನು ಅಮಿಕಸ್‌ ಕ್ಯುರೇ, ಹಿರಿಯ ವಕೀಲ ಅರವಿಂದ್‌ ನಿಗಮ್‌ ನ್ಯಾಯಾಲಯಕ್ಕೆ ತಿಳಿಸಿದ್ದರು.

ನ್ಯಾಯಾಲಯದಲ್ಲಿ ಇಂದು ಹಾಜರಿದ್ದ ಅಗ್ನಿಹೋತ್ರಿ, ತಮಗೆ ನ್ಯಾಯಾಂಗದ ಮೇಲೆ ಬಹಳಷ್ಟು ಗೌರವವಿದೆ ಎಂದು ಹೇಳಿದ್ದಾರೆ. 

ಏನಿದು ಪ್ರಕರಣ?
ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ಗೌತಮ್‌ ನವ್ಲಖ ಅವರ ಗೃಹ ಬಂಧನ ಮತ್ತು ಟ್ರಾನ್ಸಿಟ್‌ ರಿಮಾಂಡ್‌ ಆದೇಶವನ್ನು ರದ್ದುಪಡಿಸಿ ಜಸ್ಟಿಸ್‌ ಮುರಳೀಧರ್‌ ಆದೇಶ ಹೊರಡಿಸಿದ್ದರು. ಇದೇ ವಿಚಾರವಾಗಿ ವಿವೇಕ್ ಅಗ್ನಿಹೋತ್ರಿ ಟ್ವೀಟ್‌ ಮಾಡಿದ್ದರು. ದೆಹಲಿ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಹಾಗೂ ಪ್ರಸಕ್ತ ಒಡಿಶಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್‌ ಮುರಳೀಧರ್‌ ಅವರ ವಿರುದ್ಧದ ಪೋಸ್ಟ್‌ ಒಂದನ್ನು ಅಗ್ನಿಹೋತ್ರಿ 2018 ರಲ್ಲಿ ರಿಟ್ವೀಟ್‌ ಮಾಡಿದ್ದರು. ಆ ನಿರ್ದಿಷ್ಟ ಟ್ವೀಟ್‌ ಹಾಲಿ ಹೈಕೋರ್ಟ್‌ ನ್ಯಾಯಾಧೀಶರೊಬ್ಬರ ವಿರುದ್ಧದ ಉದ್ದೇಶಪೂರ್ವಕ ದಾಳಿ ಆಗಿತ್ತು ಎಂದು ಹಿರಿಯ ವಕೀಲ ರಾಜಶೇಖರ್‌ ರಾವ್‌ ಅವರು ನ್ಯಾಯಾಲಯಕ್ಕೆ ಪತ್ರ ಬರೆದ ನಂತರ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇಂದು ಅಗ್ನಿಹೋತ್ರಿ ಕ್ಷಮೆಯಾಚಿಸಿದ ಬೆನ್ನಲ್ಲೇ ಜಸ್ಟಿಸ್‌ ಸಿದ್ಧಾರ್ಥ್‌ ಮೃದುಲ್‌ ಮತ್ತು ಜಸ್ಟಿಸ್‌ ವಿಕಾಸ್‌ ಮಹಾಜನ್‌ ಅವರ ವಿಭಾಗೀಯ ಪೀಠ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಾಪಸ್‌ ಪಡೆದುಕೊಂಡಿತಲ್ಲದೆ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ.

SCROLL FOR NEXT