ದೇಶ

ಬಿಆರ್‌ಎಸ್ ಸಭೆ ನಡೆಯುವ ಸ್ಥಳದಲ್ಲಿ ಸಿಲಿಂಡರ್‌ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ!

Vishwanath S

ಖಮ್ಮಂ: ಖಮ್ಮಂ ಜಿಲ್ಲೆಯ ವೈರಾ ವಿಧಾನಸಭಾ ಕ್ಷೇತ್ರದ ಕಾರೇಪಲ್ಲಿ ಮಂಡಲಿಯ ಚಿಮಲಪಾಡುವಿನಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಆಯೋಜಿಸಿದ್ದ ಆತ್ಮೀಯ ಸಮ್ಮೇಳನದ ಸಮಾವೇಶದ ವೇಳೆ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಾವನ್ನಪ್ಪಿದ್ದು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಹಲವರು ತೀವ್ರ ಗಾಯಗೊಂಡಿದ್ದಾರೆ.

ಬಿಆರ್‌ಎಸ್ ಸಭೆಯಲ್ಲಿ ಉತ್ಸಾಹಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಾರೆ. ಈ ವೇಳೆ ಕಿಡಿ ಪಕ್ಕದ ಹುಲ್ಲಿನ ಮನೆಗೆ ವ್ಯಾಪಿಸಿ ಬೆಂಕಿ ಹೊತ್ತಿಕೊಂಡಿದ್ದು ನಂತರ ಹುಲ್ಲಿನ ಮನೆಯಲ್ಲಿದ್ದ ಹಲವಾರು ಸಿಲಿಂಡರ್‌ಗಳು ಬೆಂಕಿಯಿಂದ ಸ್ಫೋಟಗೊಂಡಿವೆ. ಘಟನೆಯಿಂದ ಮನೆಯಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸ್ಫೋಟದ ರಭಸಕ್ಕೆ ವ್ಯಕ್ತಿಯ ಕಾಲು ಮತ್ತು ಕೈಗಳು ತುಂಡಾಗಿವೆ.

ಮೂಲಗಳ ಪ್ರಕಾರ, ಘಟನೆಯಲ್ಲಿ ಗಾಯಗೊಂಡಿರುವ ಇತರ ನಾಲ್ವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಬಿಆರ್‌ಎಸ್ ಆಯೋಜಿಸಿದ್ದ ರ್ಯಾಲಿಯಲ್ಲಿ ಖಮ್ಮಂ ಲೋಕಸಭಾ ಸದಸ್ಯ ನಾಮ ನಾಗೇಶ್ವರ ರಾವ್ ಸೇರಿದಂತೆ ಮುಖಂಡರು ಭಾಗವಹಿಸಿದ್ದರು. ಹುಲ್ಲಿನ ಮನೆ ಮುಖ್ಯ ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿದೆ. ಬಿಆರ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹಾಗೂ ಬಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ಐಟಿ ಸಚಿವ ಕೆಟಿ ರಾಮರಾವ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಸಿಎಂ ಕೆಸಿಆರ್ ಅವರು ಸಾರಿಗೆ ಸಚಿವ ಪುವ್ವಾಡ ಅಜಯ್ ಕುಮಾರ್ ಮತ್ತು ಸಂಸದ ನಾಮ ನಾಗೇಶ್ವರ ರಾವ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಪಘಾತದ ವಿವರಗಳನ್ನು ತಿಳಿದುಕೊಂಡಿದ್ದಾರೆ. ಮೃತ ಕುಟುಂಬಗಳ ಸದಸ್ಯರನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸಲಾಗುವುದು ಎಂದು ಕೆಸಿಆರ್ ಭರವಸೆ ನೀಡಿದರು. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

SCROLL FOR NEXT