ದೇಶ

ರಾಹುಲ್ ಗಾಂಧಿಗೆ ಜೈಲು ಶಿಕ್ಷೆ: ಭಾರತೀಯ ನ್ಯಾಯಾಂಗಕ್ಕೆ 'ಅಗ್ನಿ ಪರೀಕ್ಷೆ' ಎಂದ ಕಾಂಗ್ರೆಸ್

Lingaraj Badiger

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿರುವುದು ಮತ್ತು ಲೋಕಸಭೆಯಿಂದ ಅನರ್ಹಗೊಳಿಸಲು ಬಳಸಿದ ಕಾನೂನು ಪ್ರಕ್ರಿಯೆಯು "ತುಂಬಾ ದೋಷಪೂರಿತವಾಗಿದೆ" ಮತ್ತು ಇದು ಭಾರತೀಯ ನ್ಯಾಯಾಂಗಕ್ಕೆ "ಅಗ್ನಿ ಪರೀಕ್ಷೆ"ಯಾಗಿದ್ದು, ಅದನ್ನು ಸರಿಪಡಿಸಲಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಆನಂದ್ ಶರ್ಮಾ ಅವರು ಬುಧವಾರ ಆಶಿಸಿದ್ದಾರೆ.

ಇಂದು ಎಐಸಿಸಿ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ವಕ್ತಾರ, ರಾಹುಲ್ ಗಾಂಧಿಯ ಶಿಕ್ಷೆ ಮತ್ತು ಅನರ್ಹತೆಯ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಅದು "ಕಾನೂನು ಮತ್ತು ಸಂವಿಧಾನದಲ್ಲಿ ಅತ್ಯಂತ ದೋಷಪೂರಿತವಾಗಿದೆ" ಎಂದು ಹೇಳಿದ್ದಾರೆ.

"ಎಲ್ಲರಿಗೂ ಇದೇ ಮಾನದಂಡವನ್ನು ಅನ್ವಯಿಸಿದರೆ, ಬಹುಶಃ ಭಾರತದ ಸಂಸತ್ತು ಟೊಳ್ಳಾಗುತ್ತಿತ್ತು. ರಾಜಕೀಯ ಪಕ್ಷಗಳ ಹೆಚ್ಚಿನ ಪ್ರಮುಖ ನಾಯಕರು ದಶಕಗಳಿಂದ ಸಂಸತ್ತಿನಿಂದ ಹೊರಗುಳಿಯುತ್ತಿದ್ದರು. ಆದರೆ ಹಾಗಾಗಿಲ್ಲ" ಎಂದಿದ್ದಾರೆ.

"ಇದು ಭಾರತೀಯ ನ್ಯಾಯಾಂಗಕ್ಕೂ ಅಗ್ನಿಪರೀಕ್ಷೆಯಾಗಲಿದೆ. ತಪ್ಪನ್ನು ಸರಿಪಡಿಸಲಾಗುವುದು, ಕಾನೂನಿನ ದೋಷಪೂರಿತ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುತ್ತದೆ. ಕಾನೂನು ಮತ್ತು ಸಂವಿಧಾನದ ಬಗ್ಗೆ ನನಗಿರುವ ತಿಳುವಳಿಕೆಯನ್ನು ನಾನು ಹೇಳುತ್ತಿದ್ದೇನೆ" ಎಂದು ಶರ್ಮಾ ತಿಳಿಸಿದ್ದಾರೆ.

ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಇದನ್ನು ಅನುಸರಿಸಿ ಮಾಜಿ ಕಾಂಗ್ರೆಸ್ ಅಧ್ಯಕ್ಷರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಅಲ್ಲದೆ ತುಘಲಕ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22 ರೊಳಗೆ ಖಾಲಿ ಮಾಡುವಂತೆ ಲೋಕಸಭೆ ಸೆಕ್ರೆಟರಿಯೇಟ್ ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ.

SCROLL FOR NEXT