ದೇಶ

ಭೀಕರ ದೃಶ್ಯ: ಕಳ್ಳತನದ ಶಂಕೆಯಿಂದಾಗಿ ಮ್ಯಾನೇಜರ್ ಗೆ ಥಳಿಸಿ ಕೊಂದ ಕಿರಾತಕರು, ವಿಡಿಯೋ ವೈರಲ್!

Vishwanath S

ಲಖನೌ: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಕಳ್ಳತನದ ಶಂಕೆಯಿಂದ ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

32 ವರ್ಷದ ಶಿವಂ ಜೋಹ್ರಿ ಎಂಬಾತನನ್ನು ತನ್ನ ಬಾಸ್‌ನ ಆಜ್ಞೆಯ ಮೇರೆಗೆ ಗುಂಪೊಂದು ಥಳಿಸಿದ್ದು ನಂತರ ದೇಹವನ್ನು ಸರ್ಕಾರಿ ಆಸ್ಪತ್ರೆಯ ಹೊರಗೆ ಎಸೆದು ಹೋಗಿದ್ದರು. ಶಿವಂ ಸಾರಿಗೆ ಉದ್ಯಮಿಯೊಬ್ಬರ ಬಳಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಹಲ್ಲೆಯ ವಿಡಿಯೋ ವೈರಲ್ ಆದ ನಂತರ ಏಳು ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಶಿವಂ ಕಂಬಕ್ಕೆ ಕಟ್ಟಿ ಥಳಿಸುತ್ತಿದ್ದು ಆತ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಪದೇ ಪದೇ ರಾಡ್‌ನಿಂದ ಹೊಡೆಯುತ್ತಿದ್ದಾನೆ.

ಈವರೆಗಿನ ತನಿಖೆಯಿಂದ ಶಿವಂ ಕಳೆದ ಏಳು ವರ್ಷಗಳಿಂದ ಸಾರಿಗೆ ಉದ್ಯಮಿ ಬಂಕಿಮ್ ಸೂರಿ ಅವರೊಂದಿಗೆ ಕೆಲಸ ಮಾಡುತ್ತಿದ್ದನು. ಇತ್ತೀಚೆಗಷ್ಟೇ ಖ್ಯಾತ ಉದ್ಯಮಿ ಕನ್ಹಯ್ಯಾ ಹೊಸೈರಿ ಅವರಿಗೆ ಬಂದಿದ್ದ ಪಾರ್ಲಸ್ ನಾಪತ್ತೆಯಾಗಿತ್ತು. ಈ ಘಟನೆಯಿಂದಾಗಿ ಕಳ್ಳತನದ ಶಂಕೆಯಲ್ಲಿ ಹಲವಾರು ಚಾಲಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕನ್ಹಯ್ಯಾ ಹೊಸೈರಿಯ ಮಾಲೀಕ ನೀರಜ್ ಗುಪ್ತಾ ಕೊಲೆ ಪ್ರಕರಣದ ಏಳು ಆರೋಪಿಗಳಲ್ಲಿ ಸೇರಿದ್ದಾರೆ.

ಶಿವಂ ಅವರ ತಂದೆ ಅಧೀರ್ ಜೋಹ್ರಿ ಅವರು ಕನ್ಹಯ್ಯಾ ಹೊಸೈರಿಯ ಮಾಲೀಕ ನೀರಜ್ ಗುಪ್ತಾ ಮತ್ತು ಸೂರಿ ಟ್ರಾನ್ಸ್‌ಪೋರ್ಟ್ ಕಂಪನಿಯ ಮಾಲೀಕ ಬಂಕಿಮ್ ಸೂರಿ ಸೇರಿದಂತೆ 7 ಜನರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಆರೋಪಿಗಳು ಶಿವಂ ವಿರುದ್ಧ ಕಳ್ಳತನದ ಆರೋಪ ಮಾಡಿ ಥಳಿಸಿದ್ದು, ಅಲ್ಲದೆ ಕಳ್ಳತನವನ್ನು ಮಾಡಿರುವುದಾಗಿ ಒಪ್ಪಿಕೊಂಡು ಬರೆದುಕೊಂಡುವಂತೆ ಒತ್ತಾಯಿಸಿದರು. ಅದಕ್ಕೆ ನಿರಾಕರಿಸಿದಾಗ ಶಿವಂನನ್ನು ಹೊಡೆದು ಕೊಂದಿದ್ದಾರೆ ಎಂದು ಶಿವಂ ಅವರ ತಂದೆ ಆರೋಪಿಸಿದ್ದಾರೆ.

ಮಂಗಳವಾರ ರಾತ್ರಿ ಶಿವಂ ಅವರ ಮೃತದೇಹವನ್ನು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಬಳಿ ಬಿಸಾಡಲಾಗಿತ್ತು. ಶಿವಂಗೆ ಥಳಿಸಿದ್ದು ಅಲ್ಲದೆ ವಿದ್ಯುತ್ ಶಾಕ್‌ ಕೊಟ್ಟು ಸಾಯಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಕನ್ಹಯ್ಯಾ ಹೊಸೈರಿಯ ಆವರಣದಿಂದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಿಂದ ಅಪರಾಧದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT