ದೇಶ

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಆಘಾತಕಾರಿ: ಮಮತಾ ಬ್ಯಾನರ್ಜಿ

Ramyashree GN

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಭಾನುವಾರ ಹೇಳಿದ್ದಾರೆ.

ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆಂದು ಕರೆದೊಯ್ಯುತ್ತಿದ್ದಾಗ ಪತ್ರಕರ್ತರಂತೆ ನಟಿಸಿದ್ದ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮಮತಾ ಈ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಅಪರಾಧಿಗಳು ಈಗ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸರು ಮತ್ತು ಮಾಧ್ಯಮಗಳ ಉಪಸ್ಥಿತಿಯಿದ್ದಾಗಲೂ ವಿಚಲಿತರಾಗದೆ ಕೃತ್ಯ ಎಸಗಿದ್ದಾರೆ. ಇದು 'ನಾಚಿಕೆಗೇಡಿನ' ಕೃತ್ಯ ಎಂದು ಬಣ್ಣಿಸಿದರು.

'ಉತ್ತರ ಪ್ರದೇಶದಲ್ಲಿನ ಅರಾಜಕತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಕುಸಿತದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಪೊಲೀಸರು ಮತ್ತು ಮಾಧ್ಯಮದ ಉಪಸ್ಥಿತಿಯಿಂದ ವಿಚಲಿತರಾಗದ ಅಪರಾಧಿಗಳು ಈಗ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ' ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಶನಿವಾರ ರಾತ್ರಿ ಪೊಲೀಸ್ ಸಿಬ್ಬಂದಿ ತಪಾಸಣೆಗಾಗಿ ಇಲ್ಲಿನ ವೈದ್ಯಕೀಯ ಕಾಲೇಜಿಗೆ ಅವರನ್ನು ಕರೆದೊಯ್ಯುತ್ತಿದ್ದಾಗ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಮೂವರು ವ್ಯಕ್ತಿಗಳು ಇಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. 

ಅತೀಕ್ ಅಹ್ಮದ್ ಅವರ ಮನೆ ಇರುವ ಪ್ರಯಾಗ್‌ರಾಜ್‌ನ ಚಕಿಯಾ ಪ್ರದೇಶದಲ್ಲಿ ಭಾನುವಾರ ಪೊಲೀಸ್ ಗಸ್ತು ತೀವ್ರಗೊಳಿಸಲಾಯಿತು. ಉತ್ತರ ಪ್ರದೇಶದ ಪೊಲೀಸರು ರಾಜ್ಯದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದ್ದರೂ ಸಹ, ಅತೀಕ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

SCROLL FOR NEXT