ದೇಶ

ದೇಶದಲ್ಲಿ ಮತ್ತೆ ಕೊರೋನಾ ಹೆಚ್ಚಳ: ಕಳೆದ 24 ಗಂಟೆಗಳಲ್ಲಿ 9,111 ಹೊಸ ಪ್ರಕರಣ ದಾಖಲು

Nagaraja AB

ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 9,111 ಹೊಸ ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 60,313 ಕ್ಕೆ ಏರಿದೆ. 27 ಮಂದಿ ಮೃತಪಟ್ಟಿದ್ದು, ಒಟ್ಟಾರೇ  ಸಾವಿನ ಸಂಖ್ಯೆ 5,31,141 ಕ್ಕೆ ಏರಿದೆ.

ಗುಜರಾತ್‌ನಿಂದ ಆರು ಮಂದಿ ಸಾವನ್ನಪ್ಪಿರುವುದು ವರದಿಯಾಗಿದ್ದರೆ, ಉತ್ತರಪ್ರದೇಶದಿಂದ ನಾಲ್ಕು, ದೆಹಲಿ ಮತ್ತು ರಾಜಸ್ಥಾನದಿಂದ ತಲಾ ಮೂರು, ಮಹಾರಾಷ್ಟ್ರದಿಂದ ಎರಡು, ಬಿಹಾರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ ಮತ್ತು ತಮಿಳುನಾಡಿನಿಂದ ತಲಾ ಒಂದು ಮತ್ತು ಕೇರಳದಿಂದ ಮೂರು ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. 

ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4.47 ಕೋಟಿ (4,48,27,226) ದಾಖಲಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇಕಡಾ 8.40 ರಷ್ಟಿತ್ತು ಮತ್ತು ವಾರದ ಪಾಸಿಟಿವಿಟಿ ದರಶೇಕಡಾ 4.94ರಷ್ಟಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕಿನ ಶೇ. 0.13 ರಷ್ಟನ್ನು ಒಳಗೊಂಡಿದ್ದರೆ ರಾಷ್ಟ್ರೀಯ ಚೇತರಿಕೆ ದರ ಶೇ. 98.68 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,42,35,772 ಕ್ಕೆ ಏರಿದೆ ಮತ್ತು  ಸಾವಿನ ಪ್ರಮಾಣ ಶೇಕಡಾ 1.19 ರಷ್ಟಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

SCROLL FOR NEXT