ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಬಿಸಿಲಿನ ತಾಪದಿಂದ 14 ಮಂದಿ ಸಾವನ್ನಪ್ಪಿದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಗುರುವಾರ ಒತ್ತಾಯಿಸಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು 14 ಜನರ ಸಾವಿನ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಕಂದಾಯ) ನಿತಿನ್ ಕೀರ್ ಅವರ ಏಕಸದಸ್ಯ ಸಮಿತಿ ರಚಿಸಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣವಾಗಿದ್ದು, ಈ ಸಂಬಂಧ "ಮಾನವ ಹತ್ಯೆ" ಪ್ರಕರಣ ದಾಖಲಿಸಬೇಕು ಎಂದು ಪವಾರ್ ಹೇಳಿದ್ದಾರೆ.
ಈ ಸಂಬಂಧ ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ಪತ್ರ ಬರೆದಿರುವ ಅಜಿತ್ ಪವಾರ್, ನಿವೃತ್ತ ನ್ಯಾಯಾಧೀಶರಿಂದ ಪ್ರಕರಣ ತನಿಖೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಮಹಾ ಭೂಷಣ್ ಪ್ರಶಸ್ತಿ ಸಮಾರಂಭ: ಬಿಸಿಲಿನ ಝಳಕ್ಕೆ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆ, ಇನ್ನೂ 7 ಜನ ಆಸ್ಪತ್ರೆಯಲ್ಲಿ
ಆರಂಭದಲ್ಲಿ, ಬಿಸಿಲಿನ ತಾಪದಿಂದ 14 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದರೆ ನಂತರ ಕೆಲವು ವರದಿಗಳು ಏಪ್ರಿಲ್ 16 ರ ಈವೆಂಟ್‌ನಲ್ಲಿ ಕಾಲ್ತುಳಿತದಿಂದ ಸಾವು ಸಂಭವಿಸಿದೆ ಎಂದು ಹೇಳಿರುವುದಾಗಿ ಎಂದು ಎನ್‌ಸಿಪಿ ನಾಯಕ ತಿಳಿಸಿದ್ದಾರೆ.
ಕಳೆದ ಖಾರ್ಘರ್ ಖಾರ್ಘರ್‌ನ 306 ಎಕರೆ ವಿಸ್ತಾರವಾದ ಮೈದಾನದಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಅಲಿಯಾಸ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಸಿಲಿನ ಝಳದಿಂದ ಡಿಹೈಡ್ರೇಶನ್ ಹಾಗೂ ಶಾಖ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ 14 ಮಂದಿ ಮೃತಪಟ್ಟಿದ್ದರು.