ದೇಶ

ವಿಮಾ ಹಗರಣ: ಜಮ್ಮು ಮತ್ತು ಕಾಶ್ನೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್‌ಗೆ ಸಿಬಿಐ ಸಮನ್ಸ್

Lingaraj Badiger

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಜಮ್ಮು ಮತ್ತು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಸಿಬಿಐ ಸಮನ್ಸ್  ಜಾರಿಗೆ ಮಾಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಫೆಬ್ರವರಿ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಲವು ದಿನಗಳಲ್ಲಿ ಸಿಬಿಐ ಅವರಿಗೆ ಸಮನ್ಸ್ ನೀಡಿದೆ.

ಮಲಿಕ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಕೇಂದ್ರ ಸರ್ಕಾರದ ಅಸಮರ್ಥತೆಯ ಪರಿಣಾಮ  ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದಿದೆ ಎಂದು ಹೇಳಿದ್ದರು ಮತ್ತು ಇದು ಅತಿ ದೊಡ್ಡ "ಗುಪ್ತಚರ ವೈಫಲ್ಯ" ಎಂದು ಆರೋಪಿಸಿದ್ದರು.

ಸಿಬಿಐ ಸಮನ್ಸ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಮಲಿಕ್, ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಇಲ್ಲಿನ ಅಕ್ಬರ್ ರಸ್ತೆಯ ಅತಿಥಿಗೃಹದಲ್ಲಿ "ಕೆಲವು ಸ್ಪಷ್ಟೀಕರಣಗಳಿಗಾಗಿ" ನನ್ನನ್ನು ಕರೆದಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.

"ಸಿಬಿಐ ನನ್ನಿಂದ ಕೆಲವು ಸ್ಪಷ್ಟೀಕರಣಗಳನ್ನು ಬಯಸಿದ್ದು, ಅದಕ್ಕಾಗಿ ಸಮನ್ಸ್ ಜಾರಿ ಮಾಡಿದೆ. ನಾನು ಈಗ ರಾಜಸ್ಥಾನಕ್ಕೆ ಹೋಗುತ್ತಿದ್ದೇನೆ. ಏಪ್ರಿಲ್ 27 ರಿಂದ 29 ರವರೆಗೆ ನಾನು ಲಭ್ಯವಿರುವುದಾಗಿ ಅವರಿಗೆ ತಿಳಿಸಿದ್ದೇನೆ" ಎಂದು ಮಲಿಕ್ ಹೇಳಿದ್ದಾರೆ.

ಕಳೆದ ವರ್ಷ ಇದೇ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಜಮ್ಮು ಮತ್ತು ಕಾಶ್ಮೀರ ಮಾಜಿ ರಾಜ್ಯಪಾಲರನ್ನು ವಿಚಾರಣೆ ನಡೆಸಿತ್ತು.

SCROLL FOR NEXT