ದೇಶ

ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ; ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್ ಸಹೋದರಿ ವೈಎಸ್‌ ಶರ್ಮಿಳಾ ಬಂಧನ, 14 ದಿನ ಪೊಲೀಸ್ ಕಸ್ಟಡಿ

Srinivasamurthy VN

ಹೈದರಾಬಾದ್: ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್ ಸಹೋದರಿ ಹಾಗೂ ತೆಲಂಗಾಣ ರಾಜಕಾರಣಿ ವೈಎಸ್‌ ಶರ್ಮಿಳಾರನ್ನು ಪೊಲೀಸರು ಬಂಧಿಸಿದ್ದು, ಅವರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ವೈಎಸ್ ಶರ್ಮಿಳಾ ತಮ್ಮ ನಿವಾಸದ ಹೊರಗೆ ಪೊಲೀಸರ ಜತೆ ವಾಗ್ವಾದ ನಡೆಸಿದ್ದು, ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರನ್ನು ಸೋಮವಾರ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲವಾಗಿದ್ದು, ಈ ವೇಳೆ ನ್ಯಾಯಾಧೀಶರು ಅವರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಉಪ ಕಮಿಷನರ್ (ಪಶ್ಚಿಮ ವಲಯ) ಜೋಯಲ್ ಡೇವಿಸ್ ಅವರು, 'ಶರ್ಮಿಳಾ ಅವರು ಅನುಮತಿ ಪಡೆಯದೇ ಪ್ರತಿಭಟನೆಯೊಂದರಲ್ಲಿ ಭಾಗವಹಿಸಲು ಶರ್ಮಿಳಾ ತೆರಳುತ್ತಿದ್ದಾಗ ಅವರನ್ನು ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಆಗ ಅವರ ಮೇಲೆ ಶರ್ಮಿಳಾ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಅವರು ಎಸ್‌ಐಟಿ ಕಚೇರಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಾಗ, ಅವರು ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಹಾಗಾಗಿ, ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿದ್ದರು’ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

‘ಅಧಿಕಾರಿಗಳು ಶರ್ಮಿಳಾ ಅವರಿಗೆ ಮಾಹಿತಿ ನೀಡಲು ಮತ್ತು ತಮ್ಮ ನಿವಾಸದಿಂದ ಹೊರ ಹೋಗದಂತೆ ತಡೆಯಲು ಅಲ್ಲಿಗೆ ತೆರಳಿದರು. ಆದರೆ, ಅವರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ದೃಶ್ಯಗಳು ವರದಿಯಾಗಿವೆ. ಈ ಸಂಬಂಧ ಅಧಿಕಾರಿಗಳಿಂದ ದೂರು ಪಡೆದ ಬಳಿಕ ಕಾನೂನುಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದ್ದಾರೆ.

ಪೊಲೀಸರಿಂದ ಬಲವಂತದ ಗೃಹಬಂಧನ: ಶರ್ಮಿಳಾ ಆರೋಪ
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶರ್ಮಿಳಾ ಅವರು, ‘ಟಿಎಸ್‌ಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ನಾನು ಎಸ್ಐಟಿ ಕಚೇರಿಗೆ ತೆರಳಲು ಯೋಚಿಸಿದ್ದೆ. ಆದರೆ, ಪೊಲೀಸರು ನನ್ನನ್ನು ಗೃಹಬಂಧನದಲ್ಲಿಟ್ಟರು. ಆತ್ಮರಕ್ಷಣೆಗಾಗಿ ಕಾರ್ಯನಿರ್ವಹಿಸುವುದು ನನ್ನ ಜವಾಬ್ದಾರಿ. ಪೊಲೀಸರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಹೇಳಿದ್ದಾರೆ. 

ಶರ್ಮಿಳಾ ತಮ್ಮ ಕಾರಿನಲ್ಲಿ ಕುಳಿತುಕೊಳ್ಳಲು ಮುಂದಾಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಯೊಬ್ಬರು ಕಾರಿನ ಬಾಗಿಲಿಗೆ ಅಡ್ಡ ನಿಲ್ಲುತ್ತಾರೆ. ಆಗ ಶರ್ಮಿಳಾ ಪೊಲೀಸರ ಜತೆಗೆ ವಾಗ್ವಾದ ನಡೆಸುವ ದೃಶ್ಯಗಳೂ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. 
 

SCROLL FOR NEXT