ದೇಶ

ದೇಶದಲ್ಲಿ ಕರ್ನಾಟಕದ ಶಾಸಕರೇ ಅತಿ ಹೆಚ್ಚು ಶ್ರೀಮಂತರು; ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

Lingaraj Badiger

ನವದೆಹಲಿ: ದೇಶದಲ್ಲಿಯೇ ಕರ್ನಾಟಕ ಶಾಸಕರು ಅತಿ ಹೆಚ್ಚು ಶ್ರೀಮಂತರಾಗಿದ್ದು, ರಾಜ್ಯಗಳ ಪೈಕಿ ಕರ್ನಾಟಕದ ಶಾಸಕರ ಆಸ್ತಿಯೇ ಅತಿ ಹೆಚ್ಚು ಎಂದು ಮಂಗಳವಾರ ವರದಿಯೊಂದು ತಿಳಿಸಿದೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್(ನ್ಯೂ) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕರ್ನಾಟಕದ 223 ಶಾಸಕರ ಒಟ್ಟು ಆಸ್ತಿ 14,359 ಕೋಟಿ ರೂ.ಗಳಾಗಿದ್ದು, ಇದು 2023-24ರ ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತ ಹೆಚ್ಚು ಎಂದು ಹೇಳಿದೆ.

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4001 ಹಾಲಿ ಶಾಸಕರ ಒಟ್ಟು ಆಸ್ತಿ ಮೌಲ್ಯ 54,545 ಕೋಟಿ ರೂ. ಆಗಿದ್ದು, ಕರ್ನಾಟಕ ಶಾಸಕರ ಆಸ್ತಿ ಶೇ.26 ರಷ್ಟಿದೆ.

ವರದಿಯ ಪ್ರಕಾರ, ಕರ್ನಾಟಕದ ನಂತರ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದು, 284 ಶಾಸಕರ ಒಟ್ಟು ಆಸ್ತಿ 6,679 ಕೋಟಿ ರೂ. ಇದೆ. ಆಂಧ್ರಪ್ರದೇಶ ಮೂರನೇ ಸ್ಥಾನದಲ್ಲಿದ್ದು, 174 ಶಾಸಕರು ಒಟ್ಟು 4,914 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ವರದಿಯ ಪ್ರಕಾರ, ತ್ರಿಪುರಾ ಅತ್ಯಂತ ಕಡಿಮೆ ಶಾಸಕರ ಆಸ್ತಿಯನ್ನು ಹೊಂದಿದೆ. ರಾಜ್ಯದ 59 ಶಾಸಕರ ಒಟ್ಟು ಆಸ್ತಿ 90 ಕೋಟಿ ರೂ., ಮಿಜೋರಾಂನ 40 ಶಾಸಕರು 190 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಮತ್ತು ಮಣಿಪುರದ 60 ಶಾಸಕರು ಒಟ್ಟು 225 ಕೋಟಿ ಆಸ್ತಿ ಹೊಂದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಶಾಸಕರು ಸಲ್ಲಿಸಿದ ಅಫಿಡವಿಟ್‌ಗಳಿಂದ ಡೇಟಾವನ್ನು ಹೊರತೆಗೆಯಲಾಗಿದೆ.

ರಾಷ್ಟ್ರದಾದ್ಯಂತ ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಲಿ ಶಾಸಕರು ಸಲ್ಲಿಸಿದ ಅಫಿಡವಿಟ್‌ಗಳಿಂದ ವಿಶ್ಲೇಷಿಸಿದ ನಂತರ ಈ ವರದಿ ಬಿಡುಗಡೆ ಮಾಡಲಾಗಿದೆ.

28 ರಾಜ್ಯಗಳ ವಿಧಾನಸಭೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 4,033 ಶಾಸಕರ ಪೈಕಿ ಒಟ್ಟು 4,001 ಶಾಸಕರ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ ಎಂದು ವರದಿ ಹೇಳಿದೆ. ಈ ವರದಿಯು 84 ರಾಜಕೀಯ ಪಕ್ಷಗಳಿಗೆ ಸೇರಿದ 4,001 ಹಾಲಿ ಶಾಸಕರು ಮತ್ತು ಪಕ್ಷೇತರ ಶಾಸಕರನ್ನು ಒಳಗೊಂಡಿದೆ.

SCROLL FOR NEXT