ನವದೆಹಲಿ: ಮಣಿಪುರ ಸಮಸ್ಯೆ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಈ ಸಂಬಂಧ ರಾಷ್ಟ್ರಪತಿಗಳಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಅವರು ಹೇಳಿದರು.
ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಮಗ್ರ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳು ಪಟ್ಟುಹಿಡಿದಿದ್ದು, ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸುತ್ತಲೇ ಇವೆ.
ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಿದೆ ಮತ್ತು ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಈಗ ಈ ವಿಚಾರದಲ್ಲಿ ರಾಷ್ಟ್ರಪತಿಗಳ ಮಧ್ಯಸ್ಥಿಕೆಯನ್ನು ಕೋರಿದ್ದಾರೆ ಎನ್ನಲಾಗಿದೆ.
ವಿರೋಧ ಪಕ್ಷಗಳ 21 ಸಂಸದರ ನಿಯೋಗವು ಜನಾಂಗೀಯ ಕಲಹ ಪೀಡಿತ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದೆ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ನಿಯೋಗವು INDIA ಮೈತ್ರಿಕೂಟದ ಉಳಿದ ನಾಯಕರಿಗೆ ವಿವರಿಸಿದೆ.
ಇದನ್ನೂ ಓದಿ: ಪೊಲೀಸರು ಏನು ಮಾಡುತ್ತಿದ್ದರು?: ಮಣಿಪುರ ವೈರಲ್ ವಿಡಿಯೋ ಕುರಿತು ಕೇಂದ್ರ, ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ವಿರೋಧ ಪಕ್ಷದ ಸಂಸದರ ನಿಯೋಗವು ಮಣಿಪುರದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿತು ಮತ್ತು ಪರಿಹಾರ ಶಿಬಿರಗಳಲ್ಲಿರುವ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿತು.
ಮಣಿಪುರಕ್ಕೆ ತೆರಳಿದ ವಿರೋಧ ಪಕ್ಷದ ಸಂಸದರ ನಿಯೋಗದ ಭಾಗವಾಗಿದ್ದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯದ ಪರಿಸ್ಥಿತಿಯನ್ನು 'ಶ್ಮಶಾನ'ದಂತಾಗಿದೆ ಎಂದು ಬಣ್ಣಿಸಿದ್ದಾರೆ.