ದೇಶ

ದೆಹಲಿ ಸೇವಾ ನಿಯಂತ್ರಣ ಮಸೂದೆ; ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮನಮೋಹನ್‌ ಸಿಂಗ್‌ಗೆ ಕೇಜ್ರಿವಾಲ್ ಧನ್ಯವಾದ

Ramyashree GN

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು, ದೆಹಲಿ ಸೇವಾ ಮಸೂದೆ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ 'ದಿಲ್ಲಿಯ 2 ಕೋಟಿ ಜನರ ಪರವಾಗಿ' ಕೃತಜ್ಞತೆ ಸಲ್ಲಿಸಿದ್ದಾರೆ.

ದೆಹಲಿಯ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ 'ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ 2023' ಅನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ. ಇತ್ತ ರಾಜ್ಯಸಭೆಯಲ್ಲಿಯೂ 131 - 102 ಮತಗಳಿಂದ ಅಂಗೀಕಾರಗೊಂಡಿತು.

'ಜಿಎನ್‌ಸಿಟಿಡಿ (ತಿದ್ದುಪಡಿ) ಮಸೂದೆ, 2023 ಅನ್ನು ತಿರಸ್ಕರಿಸಲು ಮತ್ತು ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಲು ನಿಮ್ಮ ಪಕ್ಷ ನೀಡಿದ ಬೆಂಬಲಕ್ಕಾಗಿ ದೆಹಲಿಯ 2 ಕೋಟಿ ಜನರ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ವಿರೋಧ ಪಕ್ಷಗಳ ಒಕ್ಕೂಟವಾದ INDIA ಮೈತ್ರಿಯ ಭಾಗವಾಗಿವೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್, 'ನಿಮ್ಮ ವಯಸ್ಸು ಮತ್ತು ಅನಾರೋಗ್ಯದ ಹೊರತಾಗಿಯೂ ನಮ್ಮ ಪಕ್ಕದಲ್ಲಿ ನಿಮ್ಮ ಉಪಸ್ಥಿತಿಯು ಭಾರತದ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ರಚನೆಯನ್ನು ಎಲ್ಲಾ ವಿಲಕ್ಷಣಗಳ ವಿರುದ್ಧ ಸಂರಕ್ಷಿಸಲು ದೃಢತೆಯ ಕಥೆಯನ್ನು ತಿಳಿಸುತ್ತದೆ' ಎಂದಿದ್ದಾರೆ.

'ನಮ್ಮ ಸಂವಿಧಾನದ ತತ್ವಗಳ ಕಡೆಗೆ ಸಿಂಗ್ ಅವರ ಅಚಲ ಬದ್ಧತೆಯನ್ನು ದಶಕಗಳಿಂದ ನೆನಪಿಸಿಕೊಳ್ಳಲಾಗುತ್ತದೆ' ಮತ್ತು 'ಮುಂಬರುವ ಪೀಳಿಗೆಯ ಸಂಸದರಿಗೆ ಸ್ಫೂರ್ತಿ ನೀಡುತ್ತದೆ' ಎಂದಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ದೆಹಲಿ ಸೇವೆಗಳ ನಿಯಂತ್ರಣ ಮಸೂದೆಗೆ ಅಂಗೀಕಾರ ಸಿಕ್ಕಿದ್ದು, ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಕಾಯ್ದೆಯಾಗಿ ಜಾರಿಗೆ ಬರಲಿದೆ. ಈಗಾಗಲೇ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪವನ್ನು ನೀಡಲು ಸರ್ಕಾರ ಮಸೂದೆಯನ್ನು ಮಂಡಿಸಿತ್ತು.

ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ ಗೃಹ ಸಚಿವ ಅಮಿತ್ ಶಾ, 'ರಾಷ್ಟ್ರ ರಾಜಧಾನಿಯಲ್ಲಿ ಭ್ರಷ್ಟಾಚಾರ ರಹಿತ ಮತ್ತು ಪರಿಣಾಮಕಾರಿಯಾದ ಆಡಳಿತ ನೀಡುವುದು ಈ ಮಸೂದೆಯ ಉದ್ದೇಶವಾಗಿದೆ' ಎಂದರು.

SCROLL FOR NEXT