ದೇಶ

ಅಸ್ಸಾಂ ರೈಫಲ್ಸ್ ನ ಘನತೆ ಕುಗ್ಗಿಸುವ ಯತ್ನ: ಮಣಿಪುರ ಪೊಲೀಸ್ ಎಫ್ಐಆರ್ ಕುರಿತು ಸೇನೆ ಪ್ರತಿಕ್ರಿಯೆ

Srinivas Rao BV

ಮಣಿಪುರ: ಅಸ್ಸಾಂ ರೈಫಲ್ಸ್ ನ ವಿರುದ್ಧ ಮಣಿಪುರ ಪೊಲೀಸರು ಎಫ್ಐಆರ್ ದಾಖಲಿಸಿರುವುದರ ಬಗ್ಗೆ ಸೇನೆ ಪ್ರತಿಕ್ರಿಯೆ ನೀಡಿದೆ. 

ಗಲಭೆ ಪೀಡಿತ ಮಣಿಪುರದಲ್ಲಿ ಅಹಿತಕರ ಘಟನೆಗಳು ಮುಂದುವರೆಯದಂತೆ ಅಸ್ಸಾಂ ರೈಫಲ್ಸ್ ಜೊತೆ ಸೇರಿ ಕ್ರಮ ಕೈಗೊಳ್ಳುವುದನ್ನು ಸೇನೆ ಮುಂದುವರೆಸಲಿದೆ ಎಂದು ಸೇನೆ ತಿಳಿಸಿದೆ. 

ಆರ್ಮೀಸ್ ಸ್ಪಿಯರ್ ಕಾರ್ಪ್ಸ್ ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸೇನೆ, ಮಣಿಪುರ ಪೊಲೀಸರು ಎಫ್ಐಆರ್ ದಾಖಲಿಸಿರುವುದು, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಲ್ಲಿ ತೊಡಗಿರುವ ಅಸ್ಸಾಂ ರೈಫಲ್ಸ್ ನ ಘನತೆ ಕುಗ್ಗಿಸುವ ಯತ್ನ ಎಂದು ಹೇಳಿದೆ. 

"ಕೆಲವು ವಿರೋಧಿ ಶಕ್ತಿಗಳು ಕೇಂದ್ರ ಭದ್ರತಾ ಪಡೆಗಳ, ವಿಶೇಷವಾಗಿ ಅಸ್ಸಾಂ ರೈಫಲ್ಸ್‌ನ ಪಾತ್ರ, ಉದ್ದೇಶ ಮತ್ತು ಸಮಗ್ರತೆಯನ್ನು ಪ್ರಶ್ನಿಸಲು ಹತಾಶ ವಿಫಲ ಪ್ರಯತ್ನಗಳನ್ನು ಮಾಡಿವೆ" ಎಂದು ಸೇನೆ ಹೇಳಿದೆ. ಮಣಿಪುರದಲ್ಲಿನ ಪರಿಸ್ಥಿತಿಯ ಸಂಕೀರ್ಣ ಸ್ವರೂಪದಿಂದಾಗಿ, ವಿವಿಧ ಭದ್ರತಾ ಪಡೆಗಳ ನಡುವೆ ಕಾರ್ಯತಂತ್ರದ ಮಟ್ಟದಲ್ಲಿ ವ್ಯತ್ಯಾಸಗಳು ಸಂಭವಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸೇನೆ ಹೇಳಿದೆ.

ಆದಾಗ್ಯೂ, ಮಣಿಪುರದಲ್ಲಿ ಶಾಂತಿ ಮತ್ತು ಸಹಜತೆಯ ಮರುಸ್ಥಾಪನೆಗಾಗಿ ಎಲ್ಲಾ ತಪ್ಪುಗ್ರಹಿಕೆಗಳನ್ನು ತಕ್ಷಣವೇ ಪರಿಹರಿಸಲಾಗುತ್ತದೆ ಎಂದು ಸೇನೆ ಸ್ಪಷ್ಟನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಅಸ್ಸಾಂ ರೈಫಲ್ಸ್‌ನ ಕುರಿತು ತಪ್ಪು ಗ್ರಹಿಕೆ ನೀಡುವ ಉದ್ದೇಶದಿಂದ ಎರಡು ಘಟನೆಗಳು ನಡೆದಿವೆ ಎಂದು ಸೇನೆ ಹೇಳಿದೆ.

SCROLL FOR NEXT