ದೇಶ

ಮಣಿಪುರ ವಿಚಾರವಾಗಿ ಗದ್ದಲ, ರಾಜ್ಯಸಭಾ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

Nagaraja AB

ನವದೆಹಲಿ: ಮಣಿಪುರ ವಿಚಾರವಾಗಿ ರಾಜ್ಯಸಭೆಯಲ್ಲಿ ಇಂದು ಮತ್ತೆ ಗದ್ದಲವೇರ್ಪಟ್ಟಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮಣಿಪುರ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯೊಂದಿಗೆ ನಿಯಮ 167 ಅಡಿಯಲ್ಲಿ ಚರ್ಚೆ ನಡೆಯಬೇಕೆಂದು ಸಭಾಪತಿಯನ್ನು ಒತ್ತಾಯಿಸಿದರು.

ಆಡಳಿತಾರೂಢ ಪಕ್ಷದ ಸದಸ್ಯರು ಖರ್ಗೆ ಅವರ ಬೇಡಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಆಕ್ರೋಶಗೊಂಡ ಖರ್ಗೆ, ಪ್ರಧಾನಿ ಮೋದಿ ಸದನಕ್ಕೆ ಬಂದರೆ ಏನಾಗಬಹುದು ಅವರು ಪರಮಾತ್ಮರೇ? ಅವರು ದೇವರಲ್ಲ ಎಂದರು. "ಪ್ರಧಾನಿ ಮೋದಿ ಬಗ್ಗೆ ಖರ್ಗೆಯವರ ಹೇಳಿಕೆಯ ನಂತರ ಆಡಳಿತ ಪಕ್ಷದ ಸದಸ್ಯರು ಘೋಷಣೆ ಕೂಗುತ್ತಾ ಪ್ರತಿಭಟನೆ ತೀವ್ರಗೊಳಿಸಿದರು. ಈ ಗದ್ಧಲದ ನಡುವೆ ಸಭಾಪತಿ ಜಗದೀಪ್ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಲೋಕಸಭೆಯಲ್ಲಿಯೂ ಇದೇ ವಿಚಾರವಾಗಿ ಗದ್ದಲವೇರ್ಪಟ್ಟು ಮಧ್ಯಾಹ್ನ 12 ಗಂಟೆಯವರೆಗೂ ಕಲಾಪವನ್ನು ಮುಂದೂಡಲಾಗಿತ್ತು. ತದನಂತರ ಕಲಾಪ ಮತ್ತೆ ಸಮಾವೇಶಗೊಂಡಿದ್ದು, ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ಮುಂದುವರೆದಿದೆ. 
 

SCROLL FOR NEXT