ಲಖನೌ: ಉತ್ತರ ಪ್ರದೇಶ ಮತ್ತೊಂದು ಗಡಿಯಾಚೆಗಿನ ಪ್ರೇಮ ಪ್ರಕರಣವೊಂದಕ್ಕೆ ಸಾಕ್ಷಿಯಾಗಿದೆ.
ದಕ್ಷಿಣ ಕೊರಿಯಾದ ಮಹಿಳೆಯೊಬ್ಬರು ಆಕೆ ತನ್ನ ಪ್ರಿಯತಮನನ್ನು ಭೇಟಿ ಮಾಡುವುದಕ್ಕಾಗಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಪ್ರೇಮ ಪ್ರಕರಣಗಳು ಹೆಚ್ಚುತ್ತಿದ್ದು, ಈಗ ಕಿಮ್ ಬೋ- ನೀ ಎಂಬ ಮಹಿಳೆ ಶಹಜಹಾನ್ ಪುರದಲ್ಲಿರುವ ತನ್ನ ಗೆಳೆಯ ಸುಖ್ಜೀತ್ ಸಿಂಗ್ ನ್ನು ಭೇಟಿ ಮಾಡುವುದಕ್ಕಾಗಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದಾರೆ.
2 ವರ್ಷಗಳ ಹಿಂದೆ ದಕ್ಷಿಣ ಕೊರಿಯಾದಲ್ಲಿನ ಕಾಫಿ ಶಾಪ್ ಒಂದರಲ್ಲಿ ಇವರಿಬ್ಬರ ಪ್ರೇಮ ಪ್ರಕರಣ ಆರಂಭವಾಗಿತ್ತು. ಸಿಂಗ್ ಇದೇ ಕಾಫಿ ಶಾಪ್ ನಲ್ಲಿ ಉದ್ಯೋಗಿಯಾಗಿ 6 ವರ್ಷ ಕಾರ್ಯನಿರ್ವಹಿಸಿದ್ದರು. ಬಳಿಕ ಕಿಮ್ ಇದೇ ಕಾಫಿ ಶಾಪ್ ಗೆ ಬಿಲ್ಲಿಂಗ್ ಕೌಂಟರ್ ಅಟೆಂಡೆಂಟ್ ಆಗಿ ಸೇರಿಕೊಂಡಿದ್ದರು. ಇವರಿಬ್ಬರ ಸ್ನೇಹ ಕ್ರಮೇಣ ಪ್ರೇಮವಾಗಿ ಮಾರ್ಪಾಡಾಯಿತು. ಸಿಂಗ್ ಭಾರತಕ್ಕೆ 6 ತಿಂಗಳ ಅವಧಿಗೆ ವಾಪಸ್ಸಾಗಿದ್ದರು. ಆದರೆ ತನ್ನ ಗೆಳೆಯನನ್ನು ಬಿಟ್ಟಿರಲಾರದ ಕಿಮ್ ಈಗ, ಸ್ನೇಹಿತರ ಬೆಂಬಲ ಪಡೆದು ಶಹಜಹಾನ್ ಪುರಕ್ಕೆ ಬಂದು ಗೆಳೆಯನನ್ನು ಭೇಟಿ ಮಾಡಿದ್ದಾರೆ.
ಈ ಭಾವನಾತ್ಮಕ ಭೇಟಿ ಸಿಂಗ್ ಕುಟುಂಬ ಸದಸ್ಯರನ್ನೂ ಸಂತೋಷಗೊಳಿಸಿದೆ.
ವರದಿಗಳ ಪ್ರಕಾರ ಈ ಜೋಡಿ ಸಿಖ್ ಸಂಪ್ರದಾಯದಂತೆ ವಿವಾಹವಾಗಿದೆ. ಸಿಂಗ್ ಈಗ ದಕ್ಷಿಣ ಕೊರಿಯಾದಲ್ಲಿ ಕಿಮ್ ಜೊತೆ ತಮ್ಮ ಜೀವನ ಕಳೆಯುವುದಕ್ಕೆ ನಿರ್ಧರಿಸಿದ್ದಾರೆ.
ಈಗ ಮೂರು ತಿಂಗಳ ಅವಧಿಗೆ ಪ್ರವಾಸಿ ವೀಸಾದ ಮೂಲಕ ಭಾರತಕ್ಕೆ ಬಂದಿರುವ ಕಿಮ್ ಈಗಾಗಲೇ ಒಂದು ತಿಂಗಳ ಅವಧಿಯಲ್ಲಿ ಇಲ್ಲಿ ಕಳೆದಿದ್ದಾರೆ. ಕಿಮ್ ಮುಂದಿನ ವಾರಗಳಲ್ಲಿ ದಕ್ಷಿಣ ಕೊರಿಯಾಗೆ ತೆರಳಿದರೆ, ಸುಖ್ಜೀತ್ ಸಿಂಗ್ ಇನ್ನೂ 3 ತಿಂಗಳ ಬಳಿಕ ದಕ್ಷಿಣ ಕೊರಿಯಾಗೆ ತೆರಳುವ ಯೋಜನೆ ಹೊಂದಿದ್ದಾರೆ.