ವಾಷಿಂಗ್ ಟನ್: ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಸೆ.07 ರಿಂದ 10 ರಂದು ಜಿ-20 ಶೃಂಗಸಭೆ ನಡೆಯಲಿದ್ದು, ಜಿ-20 ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಜಾಗತಿಕ ಮಟ್ಟದ ನಾಯಕರೊಂದಿಗೆ ಬೈಡನ್, ಉಕ್ರೇನ್ ಸೇರಿದಂತೆ ಜಾಗತಿಕ ಸವಾಲುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ UPI ಮೂಲಕ ರಸ್ತೆ ಬದಿ ತರಕಾರಿ ಖರೀದಿಸಿದ ಜರ್ಮನಿ ಸಚಿವ, ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!
ಪ್ರಧಾನಿ ಮೋದಿ ಅವರ ಜಿ-20 ನಾಯಕತ್ವದ ಬಗ್ಗೆಯೂ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ. ನವದೆಹಲಿಯಲ್ಲಿ ಸೆ.09 ರಿಂದ 10 ವರೆಗೆ ಜಿ-20 ಜಾಗತಿಕ ನಾಯಕರ ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯು ಭಾರತದಲ್ಲಿ ವಿಶ್ವ ನಾಯಕರ ಅತಿದೊಡ್ಡ ಕೂಟಗಳಲ್ಲಿ ಒಂದಾಗುವ ನಿರೀಕ್ಷೆ ಇದೆ.
2022 ರ ಡಿ.1 ರಿಂದ ಭಾರತ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು. ಜಿ-20 ನಾಯಕರ ಶೃಂಗಸಭೆಯಲ್ಲಿ ಶುದ್ಧ ಶಕ್ತಿ ಪರಿವರ್ತನೆ, ಹವಾಮಾನ ಬದಲಾವಣೆ ಎದುರಿಸುವುದು ಉಕ್ರೇನ್ ಸಂಘರ್ಷದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ತಗ್ಗಿಸುವುದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಶ್ವೇತ ಭವನ ತಿಳಿಸಿದೆ.
ಜಾಗತಿಕ ಸವಾಲುಗಳನ್ನು ಎದುರಿಸುವುದು ಸೇರಿದಂತೆ ಬಡತನದ ವಿರುದ್ಧ ಉತ್ತಮವಾಗಿ ಹೋರಾಡಲು ವಿಶ್ವಬ್ಯಾಂಕ್ ಸೇರಿದಂತೆ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶ್ವೇತ ಭವನದ ಅಧಿಕಾರಿ ತಿಳಿಸಿದ್ದಾರೆ.