ದೇಶ

ಒಡಿಶಾ: ಡಿಐಜಿ ಪತ್ನಿಯಿಂದ ಟಾರ್ಚರ್, ಆತ್ಮಹತ್ಯೆಗೆ ಯತ್ನಿಸಿ ಎರಡೂ ಕಾಲು ಕಳೆದುಕೊಂಡ ಮಹಿಳಾ ಹೋಮ್ ಗಾರ್ಡ್!

Srinivas Rao BV

ಕಟಕ್: ಡಿಐಜಿ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಹೋಮ್ ಗಾರ್ಡ್ ಕಾಲು ಕಳೆದುಕೊಂಡಿದ್ದಾರೆ.  ಮಹಿಳೆಯ ಆರೋಪದ ಪರಿಣಾಮ ಡಿಐಜಿ ಶ್ರೇಣಿಯ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.

ಡಿಐಜಿ ಶ್ರೇಣಿ ಅಧಿಕಾರಿಯ ಪತ್ನಿಯ ಕಿರುಕುಳ ತಾಳಲಾರದೇ ಮಹಿಳಾ ಗಾರ್ಡ್ ರೈಲಿಗೆ ಸಿಲುಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆಯಲ್ಲಿ ಮಹಿಳಾ ಗಾರ್ಡ್  ಕಾಲು ಕಳೆದುಕೊಂಡಿದ್ದಾರೆ. 

ಸಂತ್ರಸ್ತೆ ಸೈರಿಂದ್ರಿ ಸಾಹು ಕಟಕ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ತಮ್ಮನ್ನು ಡಿಐಜಿ ಬ್ರಿಜೇಶ್ ರಾಯ್ ಅವರ ನಿವಾಸದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರ ಪತ್ನಿ ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಳೆದ 7 ತಿಂಗಳಿನಿಂದ ಕಿರುಕುಳ ನೀಡುತ್ತಿದ್ದರು ಎಂದು ಮಹಿಳಾ ಹೋಂ ಗಾರ್ಡ್ ದೂರು ನೀಡಿದ್ದಾರೆ. ಮನೆಯ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದೆ. ಆದರೂ ಅವರು ನನ್ನನ್ನು ನಿಂದಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. 

ಆಗಸ್ಟ್ 4 ರಂದು, ಘಟನೆ ನಡೆದ ದಿನ, ಡಿಐಜಿಯ ಪತ್ನಿ ತನ್ನ ಬಟ್ಟೆಗಳನ್ನು ಒಗೆಯಲು ಕೇಳಿದ್ದರು. ಆದರೆ ತನ್ನ ಕಾಲಿನ ಗಾಯದಿಂದಾಗಿ ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸಾಹು ಹೇಳಿದ್ದರು. ಇದರ ಪರಿಣಾಮ, ಐಪಿಎಸ್ ಅಧಿಕಾರಿಯ ಪತ್ನಿಯಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿದ್ದರು. ಅಷ್ಟೇ ಅಲ್ಲದೇ ಹೋಮ್ ಗಾರ್ಡ್ ಸಿಬ್ಬಂದಿಯಾಗಿರುವ ಮಹಿಳೆಗೆ ಕೆಲಸವನ್ನೂ ಕಿತ್ತುಕೊಳ್ಳಲಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಈ ಮಧ್ಯೆ, ಘಟನೆ ಬಗ್ಗೆ ಎನ್ ಹೆಚ್ ಆರ್ ಸಿ ಪ್ರಕರಣ ದಾಖಲಿಸಿಕೊಂಡಿದೆ. 
 

SCROLL FOR NEXT