ದೇಶ

ಮಿಜೋರಾಂ: ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದು 17 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ

Ramyashree GN

ಗುವಾಹಟಿ: ಮಿಜೋರಾಂನಲ್ಲಿ ಕುರುಂಗ್ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಬುಧವಾರ ಬೆಳಿಗ್ಗೆ 9.30ರ ಸುಮಾರಿಗೆ ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದ ಕನಿಷ್ಠ 17 ಕಾರ್ಮಿಕರು ಸಾವಿಗೀಡಾಗಿದ್ದಾರೆ.

ರಾಜ್ಯದ ರಾಜಧಾನಿ ಐಜ್ವಾಲ್‌ನಿಂದ 25 ಕಿಮೀ ದೂರದಲ್ಲಿರುವ ಸಾಯಿರಾಂಗ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಾಗ 35-40 ಕಾರ್ಮಿಕರು ಸ್ಥಳದಲ್ಲಿದ್ದ ಕಾರಣ ಇನ್ನೂ ಹಲವರು ಆ ಸ್ಥಳದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯಲ್ಲಿ ಸದ್ಯ ಹದಿನೇಳು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಸಬ್ಯಸಾಚಿ ಡಿ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದಾಗ ಸುಮಾರು 35-40 ಕಾರ್ಮಿಕರು ಸ್ಥಳದಲ್ಲಿದ್ದರು ಮತ್ತು ಅವರಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಿಜೋರಾಂ ಗೃಹ ಸಚಿವ ಲಾಲ್ಚಾಮ್ಲಿಯಾನಾ ವಿಧಾನಸಭೆಗೆ ತಿಳಿಸಿದರು.

ಅವಶೇಷಗಳಿಂದ ಇದುವರೆಗೆ ಹದಿನೇಳು ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಜ್ವಾಲ್ ಪೊಲೀಸ್ ವರಿಷ್ಠಾಧಿಕಾರಿ ರೆಕ್ಸ್ ವಾಂಚಾಂಗ್ ಮತ್ತು ಆರೋಗ್ಯ ಇಲಾಖೆಯ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

SCROLL FOR NEXT