ದೇಶ

ಕಾರ್ತಿ ಚಿದಂಬರಂ ವಿದೇಶ ಪ್ರವಾಸಕ್ಕೆ ದೆಹಲಿ ಕೋರ್ಟ್‌ ಅಸ್ತು

Lingaraj Badiger

ನವದೆಹಲಿ: ಏರ್‌ಸೆಲ್-ಮ್ಯಾಕ್ಸಿಸ್ ಮತ್ತು ಐಎನ್‌ಎಕ್ಸ್ ಮೀಡಿಯಾ ಹಗರಣದ ಆರೋಪಿ, ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರಿಗೆ ಸೆಪ್ಟೆಂಬರ್ 15 ರಿಂದ 27 ರವರೆಗೆ ಫ್ರಾನ್ಸ್ ಮತ್ತು ಬ್ರಿಟನ್ ಗೆ ಪ್ರಯಾಣಿಸಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಅನುಮತಿ ನೀಡಿದೆ.

ಶಿವಗಂಗಾ ಸಂಸದ ಕಾರ್ತಿ ಚಿದಂಬರಂ ಅವರು ಕೋರ್ಟ್ ಅನುಮತಿ ಪಡೆದು ಈಗಾಗಲೇ ಕೆಲವು ಬಾರಿ ವಿದೇಶ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ವಿದೇಶ ಪ್ರವಾಸದ ವೇಳೆ ಆರೋಪಿ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂಬುದನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರು ಕಾರ್ತಿ ಚಿದಂಬರಂ ಅವರ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ್ದಾರೆ ಮತ್ತು ನ್ಯಾಯಾಲಯದ ನಿರ್ದೇಶನಗಳು ಯಾವುದೇ ಮುಂದಿನ ತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಕಾರ್ತಿ ಚಿದಂಬರಂ ಅವರು ತಮ್ಮ ಮನವಿಯಲ್ಲಿ, ಸೆಪ್ಟೆಂಬರ್ 18 ರಿಂದ 24 ರವರೆಗೆ ಫ್ರಾನ್ಸ್‌ನ ಸೇಂಟ್ ಟ್ರೋಪೆಜ್‌ನಲ್ಲಿ ನಡೆಯಲಿರುವ ಸೇಂಟ್ ಟ್ರೋಪೆಜ್ ಓಪನ್ ಎಂಬ ಪ್ರತಿಷ್ಠಿತ ಅಂತರರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗೆ ತಮ್ಮನ್ನು ಆಹ್ವಾನಿಸಲಾಗಿದೆ ಮತ್ತು ನಂತರ ಲಂಡನ್, ಯುಕೆಗೆ ಪ್ರಯಾಣಿಸಬೇಕಾಗಿದೆ ಎಂದು ಹೇಳಿದ್ದಾರೆ. 

ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದು, ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ತನಿಖೆ ಎದುರಿಸುತ್ತಿದ್ದಾರೆ.

SCROLL FOR NEXT