ದೇಶ

ಮಧ್ಯ ಪ್ರದೇಶ: ಕಾರ್ಖಾನೆಯಲ್ಲಿ ಶಂಕಿತ ವಿಷಾನಿಲ ಉಸಿರಾಡಿ ಮೂವರು ಸಹೋದರರು ಸೇರಿ ಐವರು ಕಾರ್ಮಿಕರು ಸಾವು

Ramyashree GN

ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಬುಧವಾರ ಶಂಕಿತ ವಿಷಾನಿಲವನ್ನು ಉಸಿರಾಡಿ ಮೂವರು ಸಹೋದರರು ಸೇರಿದಂತೆ ಐವರು ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯ ಧನೇಲಾ ಪ್ರದೇಶದಲ್ಲಿರುವ ಸಾಕ್ಷಿ ಆಹಾರ ಉತ್ಪನ್ನಗಳ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಖಾನೆಯೊಳಗಿನ ಟ್ಯಾಂಕ್‌ನಿಂದ ಅನಿಲ ಹೊರಸೂಸಲಾರಂಭಿಸಿತು. ಅದನ್ನು ಪರಿಶೀಲಿಸಲು ಇಬ್ಬರು ಕಾರ್ಮಿಕರು ಪ್ರವೇಶಿಸಿದರು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಭೂಪೇಂದ್ರ ಸಿಂಗ್ ಕುಶ್ವಾಹಾ ಪಿಟಿಐಗೆ ತಿಳಿಸಿದರು.

ಆ ಅನಿಲವನ್ನು ಉಸಿರಾಡಿದ ನಂತರ ಅವರು ಅಸ್ವಸ್ಥರಾದರು. ನಂತರ ಇನ್ನೂ ಮೂವರು ಕಾರ್ಮಿಕರಿಗೆ ತೊಂದರೆಯಾಯಿತು ಎಂದು ಅವರು ಹೇಳಿದರು.

ಬಳಿಕ ಅವರೆಲ್ಲರನ್ನೂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಆ ವೇಳೆಗಾಗಲೇ ಅವರೆಲ್ಲರೂ ಮೃತಪಟ್ಟಿರುವುದಾಗಿ ಸಿವಿಲ್ ಸರ್ಜನ್ ಗಜೇಂದ್ರ ಸಿಂಗ್ ತೋಮರ್ ಘೋಷಿಸಿದರು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಖಾನೆಯು ಸಂಸ್ಕರಿಸಿದ ಚೆರ್ರಿಗಳನ್ನು ಮತ್ತು ಆಹಾರ ಉತ್ಪನ್ನಗಳಲ್ಲಿ ಬಳಸುವ ಸಕ್ಕರೆ-ಮುಕ್ತ ರಾಸಾಯನಿಕಗಳನ್ನು ತಯಾರಿಸುತ್ತದೆ.

ಮೃತರನ್ನು ಟಿಕ್ಟೋಲಿ ಗ್ರಾಮದ ಸೋದರರಾದ ರಾಮಾವತಾರ್ ಗುರ್ಜರ್ (35), ರಾಮನರೇಶ್ ಗುರ್ಜರ್ (40) ಮತ್ತು ವೀರಸಿಂಗ್ ಗುರ್ಜರ್ (30) ಮತ್ತು ಗಣೇಶ್ ಗುರ್ಜರ್ (40) ಮತ್ತು ಗಿರ್ರಾಜ್ ಗುರ್ಜರ್ (28) ಎಂದು ಗುರುತಿಸಲಾಗಿದೆ.

ಘಟನೆಯ ನಂತರ ಜಿಲ್ಲಾಧಿಕಾರಿಗಳು ಕಾರ್ಖಾನೆಯನ್ನು ತೆರವುಗೊಳಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT