ದೇಶ

ಬಿಹಾರ- ಡಿಎನ್‌ಎ ಹೇಳಿಕೆ: ತೆಲಂಗಾಣ ನಿಯೋಜಿತ ಸಿಎಂ ರೇವಂತ್ ರೆಡ್ಡಿ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ

Nagaraja AB

ಪಾಟ್ನಾ: ತೆಲಂಗಾಣ ನಿಯೋಜಿತ ಸಿಎಂ ರೇವಂತ್ ರೆಡ್ಡಿ ಅವರ 'ಬಿಹಾರ-ಡಿಎನ್‌ಎ ಟೀಕೆ ವಿರುದ್ಧ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ.

ರೆಡ್ಡಿಯವರ ಹೇಳಿಕೆಯು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೆಡ್ಡಿ ಹೇಳಿಕೆಯು ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ. ರಾಜ್ಯದಲ್ಲಿನ ಮಹಾಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲವಿದೆ, ಆದರೂ ಅವರ ನಾಯಕರು ಬಿಹಾರ ಜನರ ವಿರುದ್ಧ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಜನರು ಕಾಂಗ್ರೆಸ್ ನಾಯಕರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ. 

ಪತ್ರಕರ್ತರೊಂದಿಗಿನ ಸಂವಾದದಲ್ಲಿ ರೆಡ್ಡಿ, ತೆಲಂಗಾಣದ ಮೊದಲ ಸಿಎಂ ಕೆ ಚಂದ್ರಶೇಖರ್ ರಾವ್ ಅವರು 'ಬಿಹಾರಿ ಜೀನ್  ಹೊಂದಿದ್ದಾರೆ ಮತ್ತು ಕೆಸಿಆರ್  ಗಿಂತ ತಾನೂ  ರಾಜ್ಯಕ್ಕೆ ಉತ್ತಮ ಆಯ್ಕೆ ಎಂದು ಸೂಚಿಸಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.

"ನನ್ನ ಡಿಎನ್‌ಎ ತೆಲಂಗಾಣ. ಕೆಸಿಆರ್ ಅವರ ಡಿಎನ್‌ಎ ಬಿಹಾರ. ಅವರು ಬಿಹಾರಕ್ಕೆ ಸೇರಿದವರು. ಕೆಸಿಆರ್ ಅವರ ಜಾತಿ ಕುರ್ಮಿ. ಅವರು ಬಿಹಾರದಿಂದ ವಿಜಯನಗರಕ್ಕೆ ಮತ್ತು ಅಲ್ಲಿಂದ ತೆಲಂಗಾಣಕ್ಕೆ ವಲಸೆ ಬಂದಿದ್ದಾರೆ. ಬಿಹಾರದ ಡಿಎನ್‌ಎಗಿಂತ ತೆಲಂಗಾಣ ಡಿಎನ್‌ಎ ಉತ್ತಮವಾಗಿದೆ" ಎಂದು ರೆಡ್ಡಿ ಹೇಳಿರುವುದಾಗಿ ವರದಿಯಾಗಿದೆ. 

SCROLL FOR NEXT