ದೇಶ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಉತ್ತರ ಪ್ರದೇಶ ಬಿಜೆಪಿ ಶಾಸಕ ದೋಷಿ ಎಂದು ಕೋರ್ಟ್ ತೀರ್ಪು

Lingaraj Badiger

ಸೋನಭದ್ರ: ಒಂಬತ್ತು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ ದೋಷಿ ಎಂದು ಸ್ಥಳೀಯ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 15ಕ್ಕೆ ಕಾಯ್ದಿರಿಸಿದೆ.

2014ರಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಎಂಪಿ/ಎಂಎಲ್‌ಎ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ(ಪ್ರಥಮ) ಎಹ್ಸಾನ್ ಉಲ್ಲಾ ಖಾನ್ ಅವರು, ಬಿಜೆಪಿ ಶಾಸಕ ದೋಷಿ ಎಂದು ತೀರ್ಪು ನೀಡಿರುವುದಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಪೋಕ್ಸೊ) ಸತ್ಯಪ್ರಕಾಶ್ ತ್ರಿಪಾಠಿ ತಿಳಿಸಿದ್ದಾರೆ.

ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 15ಕ್ಕೆ ಕಾಯ್ದಿರಿಸಲಾಗಿದ್ದು, ನ್ಯಾಯಾಲಯವು ಭಾರತೀಯ ಜನತಾ ಪಕ್ಷದ(ಬಿಜೆಪಿ) ಶಾಸಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅವರು ಹೇಳಿದ್ದಾರೆ.

ಗೊಂಡ್ ಅವರು ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ದುದ್ದಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಪ್ರಕರಣದ ವಿವರ ನೀಡಿದ ತ್ರಿಪಾಠಿ, ಘಟನೆಯು ನವೆಂಬರ್ 4, 2014 ರಂದು ನಡೆದಿದ್ದು, ಶಾಸಕರ ವಿರುದ್ಧ ಪೋಕ್ಸೊ ಕಾಯಿದೆ ಅಡಿ ಕೇಸ್ ದಾಖಲಿಸಲಾಗಿತ್ತು. ಘಟನೆಯ ಸಮಯದಲ್ಲಿ ಶಾಸಕರ ಪತ್ನಿ ಗ್ರಾಮ ಪ್ರಧಾನರಾಗಿದ್ದರು ಎಂದು ಅವರು ಹೇಳಿದ್ದಾರೆ.

ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಮೇರೆಗೆ ಮೈರಪುರ ಪೊಲೀಸರು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.

SCROLL FOR NEXT