ದೇಶ

ಬಿಹಾರ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಾರು ತಡೆಯಲು ಯತ್ನಿಸಿದ ಪೊಲೀಸ್ ಅಧಿಕಾರಿಗೆ ಡಿಕ್ಕಿ ಹೊಡೆಸಿ ಹತ್ಯೆ

Lingaraj Badiger

ಬೇಗುಸರಾಯ್: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಾರೊಂದನ್ನು ಅಡ್ಡಗಟ್ಟಲು ಯತ್ನಿಸಿದ ಪೊಲೀಸ್ ಅಧಿಕಾರಿಗೆ ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ.

ರಾಜ್ಯದ ಮದ್ಯ ನಿಷೇಧಿಸಲಾಗಿದೆ. ಆದರೂ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ನಂತರ ಅವರು ವಾಹನವನ್ನು ನಿಲ್ಲಿಸಲು ಯತ್ನಿಸುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೇಗುಸರೈ ಪೊಲೀಸ್ ಅಧೀಕ್ಷಕ ಯೋಗೇಂದ್ರ ಕುಮಾರ್ ನೀಡಿದ ಹೇಳಿಕೆಯ ಪ್ರಕಾರ, ಸಬ್ ಇನ್ಸ್‌ಪೆಕ್ಟರ್ ಖಾಮಸ್ ಚೌಧರಿ(52) ಅವರನ್ನು ನೌಕೋಥಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಅವರಿಗೆ ಮದ್ಯ ಸಾಗಿಸುವ ಕಾರು ಹಾದುಹೋಗುತ್ತಿದೆ ಎಂಬ ಮಾಹಿತಿ ಬಂದಿದೆ.

ತಕ್ಷಣ ಚೌಧರಿ ಅವರು ಮೂವರು ಗೃಹ ರಕ್ಷಕ ಸಿಬ್ಬಂದಿಯನ್ನು ಕರೆದುಕೊಂಡು ಕಾರನ್ನು ಅಡ್ಡಗಟ್ಟಲು ಬುಧಿ ಗಂಡಕ್ ನದಿಯ ಸೇತುವೆಗೆ ಧಾವಿಸಿದ್ದಾರೆ. ಆದರೆ ಚಾಲಕ ಕಾರು ನಿಲ್ಲಿಸದೆ ಚೌಧರಿ ಅವರಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾನೆ. ಚೌಧರಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಹೋಮ್ ಗಾರ್ಡ್ ಒಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲು ಉಪವಿಭಾಗೀಯ ಪೊಲೀಸ್ ಅಧಿಕಾರಿ ಚಂದನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಕಾರಿನ ಮಾಲೀಕರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

SCROLL FOR NEXT