ದೇಶ

ಇಸ್ರೇಲ್ ರಾಯಭಾರ ಕಚೇರಿ ಬಳಿ ಪತ್ರ ಪತ್ತೆ ಪ್ರಕರಣ: ಎನ್ಐಎಯಿಂದ ತನಿಖೆ ಆರಂಭ

Manjula VN

ನವದೆಹಲಿ: ದೆಹಲಿಯಲ್ಲಿರುವ ಇಸ್ರೇಲ್‌ನ ರಾಯಭಾರ ಕಚೇರಿಗೆ ಬೆದರಿಕೆ ಪತ್ರ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಬುಧವಾರ ತನಿಖೆ ಆರಂಭಿಸಿದೆ.

ದೆಹಲಿ ವಿಶೇಷ ಘಟಕ ಮತ್ತು ಶ್ವಾನದಳದೊಂದಿಗೆ ಎನ್‌ಐಎ ಅಧಿಕಾರಿಗಳ ತಂಡವು ಇಸ್ರೇಲಿ ರಾಯಭಾರ ಕಚೇರಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಈ ನಡುವೆ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ದೆಹಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಇಬ್ಬರು ವ್ಯಕ್ತಿಗಳ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಅದಾಗ್ಯೂ ಸ್ಫೋಟ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ವ್ಯಕ್ತಿಗಳು ಈ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಆದರೆ, ಸ್ಫೋಟದಲ್ಲಿ ಇವರ ಪಾತ್ರ ಇನ್ನೂ ಸ್ಪಷ್ಟವಾಗಿಲ್ಲ. ನಾವು ಅವರ ಗುರುತು ಪತ್ತೆ ಮಾಡಲಾಗುತ್ತಿದ್ದು, ಘಟನೆ ವೇಳೆ ಈ ಪ್ರದೇಶದಲ್ಲಿ ಈ ವ್ಯಕ್ತಿಗಳು ಏನು ಮಾಡುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕವೇ ಸ್ಪಷ್ಟ ಮಾಹಿತಿಗಳು ತಿಳಿದುಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರು ಶಂಕಿತರು ಅಲ್ಲಿಗೆ ಹೇಗೆ ಬಂದರು? ಯಾವ ಮಾರ್ಗದಲ್ಲಿ ಹೋದರು ಎಂಬುದನ್ನು ಪತ್ತೆ ಮಾಡಲು ಪೊಲೀಸರು ಇದೀಗ ಹತ್ತಿರದ ಪ್ರದೇಶಗಳ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.

ಇಸ್ರೇಲ್ ರಾಯಭಾರಿ ಕಚೇರಿ ಸ್ಫೋಟ ಸಂಭವಿಸಿದ ಬಳಿಕ ಸ್ಥಳದಲ್ಲಿ ಇಸ್ರೇಲ್ ರಾಯಭಾರಿಯನ್ನು ಉದ್ದೇಶಿಸಿ ಬರೆದಿರುವ ಪತ್ರವೊಂದನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಪತ್ರವನ್ನು ಇಂಗ್ಲೀಷ್ ನಲ್ಲಿ ಸರ್ ಅಲ್ಲಾಹ್ ರೆಸಿಸ್ಟೆನ್ಸ್ ಎಂಬ ಗುಂಪಿನ ಹೆಸರಿನಲ್ಲಿ ಬರೆದಿರುವುದಾಗಿ ತಿಳಿದುಬಂದಿದೆ.

ಭಾರತದಲ್ಲಿರುವ ಇಸ್ರೇಲಿಗರು ಎಚ್ಚರಿಕೆ ವಹಿಸುವಂತೆ ಸೂಚನೆ
ಈ ನಡುವೆ ಇಸ್ರೇಲಿ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಪೋಟವು ಸಂಭವನೀಯ ಭಯೋತ್ಪಾದನಾ ದಾಳಿ ಎಂದು ಶಂಕಿಸಿರುವ ಇಸ್ರೇಲಿ ರಾಷ್ಟ್ರೀಯ ಭದ್ರತಾ ಮಂಡಳಿಯು, ಭಾರತದಲ್ಲಿನ ತನ್ನ ನಾಗರಿಕರಿಗೆ ಪ್ರಯಾಣ ಸಲಹೆಯನ್ನು ನೀಡಿದೆ.

ಇಸ್ರೇಲಿ ರಾಯಭಾರ ಕಚೇರಿಯ ವಕ್ತಾರ ಗೈ ನಿರ್ ಅವರು ಮಾತನಾಡಿ, ಜನಸಂದಣಿ ಇರುವ ಸ್ಥಳಗಳಿಗೆ (ಮಾಲ್‍ಗಳು ಮತ್ತು ಮಾರುಕಟ್ಟೆಗಳು) ಮತ್ತು ಪಾಶ್ಚಿಮಾತ್ಯರು, ಯಹೂದಿಗಳು ಮತ್ತು ಇಸ್ರೇಲಿಗಳಿಗೆ ಸೇವೆ ಸಲ್ಲಿಸುತ್ತಿರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ (ರೆಸ್ಟೋರೆಂಟ್‍ಗಳು, ಹೋಟೆಲ್‍ಗಳು, ಪಬ್‍ಗಳು, ಇತ್ಯಾದಿ ಸೇರಿದಂತೆ) ಹೆಚ್ಚಿನ ಜಾಗರೂಕರಾಗಿರುವಂತೆ ಒತ್ತಾಯಿಸಿದ್ದಾರೆ.

SCROLL FOR NEXT