ದೇಶ

ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಶಿವನ ಚಿತ್ರ ಬಳಕೆ: ವಿವಾದ ಹುಟ್ಟುಹಾಕಿದ ಗೋವಾದ ಸನ್​ ಬರ್ನ್​ ಫೆಸ್ಟಿವಲ್, ಕ್ರಮಕ್ಕೆ ಆಗ್ರಹ

Manjula VN

ಪಣಜಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಶಿವನ ಚಿತ್ರಗಳನ್ನು ಪ್ರದರ್ಶಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ಗೋವಾದ ಸನ್​ ಬರ್ನ್​ ಫೆಸ್ಟಿವಲ್ ನಲ್ಲಿ ನಡೆದಿದ್ದು, ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಆಗ್ರಹಿಸಿವೆ.

ಆಮ್ ಆದ್ಮಿ ಪಕ್ಷದ ಗೋವಾ ಅಧ್ಯಕ್ಷ ಅಮಿತ್ ಪಾಲೇಕರ್​ ಅವರು ಇದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸನ್​ ಬರ್ನ್​ ಫೆಸ್ಟಿವಲ್​ನಲ್ಲಿ ನೃತ್ಯ, ಸಂಗೀತ, ಮದ್ಯದ ಮಧ್ಯೆ ಶಿವನ ಚಿತ್ರವನ್ನು ಇರಿಸಲಾಗಿದ್ದು, ಇದರಿಂದ ಸನಾತನ ಧರ್ಮಕ್ಕೆ ಧಕ್ಕೆಯಾದಂತಾಗಿದೆ. ಹೀಗಾಗಿ ಆಯೋಜಕರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ನಡುವೆ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ ಮಾಪುಸಾದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ದೂರಿನಲ್ಲಿ ತಿಳಿಸಿದ್ದಾರೆ.

ಮದ್ಯ ಕುಡಿದು, ನೃತ್ಯ ಮಾಡುವಂತಹ ಕಾರ್ಯಕ್ರಮಗಳಲ್ಲಿ ನಮ್ಮ ದೇವರನ್ನು ಬಳಸುವುದು ಸರಿಯಲ್ಲ. ಸನ್‌ಬರ್ನ್ ಉತ್ಸವದ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಉತ್ಸವದಲ್ಲಿ ಮದ್ಯಪಾನ, ನಿಷೇಧಿತ ಪದಾರ್ಥಗಳ ಸೇವನೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ದೇವ ಶಿವನ ಚಿತ್ರಗಳನ್ನು ಬಳಿಸಿ, ಸಂಘಟಕರು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕಾಂಗ್ರೆಸ್ ನಿಂದ ದೂರು ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT