ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೆಸರಿದ್ದು, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೆಹಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಆಪ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರದ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್‌ನಲ್ಲಿ ಇಡಿ ಕೇಜ್ರಿವಾಲ್ ಅವರ ಹೆಸರನ್ನು ಉಲ್ಲೇಖಿಸಿದೆ. ಹೀಗಾಗಿ ಅವರು ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಒತ್ತಾಯಿಸಿದ್ದಾರೆ.
ಈ ಆರೋಪಗಳಿಗೆ ಎಎಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ದೆಹಲಿಯನ್ನು ಗೆದ್ದಲಿನ ಹಾಗೆ ದುರ್ಬಲಗೊಳಿಸುತ್ತಿರುವ ಕೇಜ್ರಿವಾಲ್ ಸರ್ಕಾರದ ಭ್ರಷ್ಟಾಚಾರವನ್ನು ಬಿಜೆಪಿ ಬಹಿರಂಗಪಡಿಸುತ್ತಲೇ ಇರುತ್ತದೆ ಎಂದು ಪ್ರತಿಭಟನೆಯಲ್ಲಿ ಸಚ್‌ದೇವ ಹೇಳಿದ್ದಾರೆ.
ನೈತಿಕತೆ ಇದ್ದರೆ ಕೇಜ್ರಿವಾಲ್ ಅವರು ಈಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಮಾತನಾಡಿ, ಕೇಜ್ರಿವಾಲ್ ಅವರ ರಕ್ಷಣೆಯಲ್ಲಿ ಮದ್ಯದ ಹಗರಣ ನಡೆದಿದೆ ಎಂದು ಬಿಜೆಪಿ ಹೇಳುತ್ತಿತ್ತು ಮತ್ತು ಅದು ಈಗ ಇಡಿ ಚಾರ್ಜ್ ಶೀಟ್‌ನಿಂದ ಸಾಬೀತಾಗಿದೆ ಎಂದರು.
ರದ್ದುಪಡಿಸಲಾದ ದೆಹಲಿ ಅಬಕಾರಿ ನೀತಿಯಿಂದ ಬಂದ 100 ಕೋಟಿ ರೂಪಾಯಿಗಳ "ಕಿಕ್‌ಬ್ಯಾಕ್" ನ ಒಂದು ಭಾಗವನ್ನು ಎಎಪಿಯು 2022ರ ಗೋವಾ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಳಸಿದೆ ಎಂದು ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಚಾರ್ಜ್ ಶೀಟ್‌ನಲ್ಲಿ ಆರೋಪಿಸಿದೆ.