ದೇಶ

ತ್ರಿಪುರಾ: ಕಾಂಗ್ರೆಸ್ ಬಿಜೆಪಿಯ 'ಬಿ' ಟೀಂ ಎಂದ ಮಮತಾ!

Nagaraja AB

ಅಗರ್ತಲಾ: ತ್ರಿಪುರಾ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಂತೆಯೇ, ಬಿಜೆಪಿ ಮತ್ತು  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಬಿಜೆಪಿಯ 'ಬಿ' ಟೀಂ ಎಂದು ಮಂಗಳವಾರ ಕರೆದಿದ್ದಾರೆ.

ಫೆಬ್ರವರಿ 16 ರಂದು ತ್ರಿಪುರಾ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳಲ್ಲಿ ಪಕ್ಷವನ್ನು ವಿಸ್ತರಿಸಲು ಉತ್ಸುಕರಾಗಿರುವ ಮಮತಾ ಬ್ಯಾನರ್ಜಿ ಇಂದು ಅಗರ್ತಲಾದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.

ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಗಾಳದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆರೋಗ್ಯ ವಿಮೆಗಾಗಿ ‘ಸ್ವಾಸ್ಥ್ಯ ಸತಿ’ ಕಾರ್ಡ್ ನೀಡುತ್ತೇವೆ.ಕೇಂದ್ರ ಸರ್ಕಾರ ನೀಡಿರುವ ಆಯುಷ್ಮಾನ್ ಭಾರತ್ ಕಾರ್ಡ್ ನಲ್ಲಿ ವಿಶ್ವಾಸಾರ್ಹತೆ ಇಲ್ಲ. ಬಂಗಾಳದ ಮಾದರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.

"ಡಬಲ್ ಇಂಜಿನ್ ಆಡಳಿತದಲ್ಲಿ ದೇಶದಲ್ಲಿ ಶೇ.40 ರಷ್ಟು ನಿರುದ್ಯೋಗ ಹೆಚ್ಚಾಗಿದೆ. ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆಯೇ? ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಬಂದಿದೆಯೇ?" ಎಂದು ಪ್ರಶ್ನಿಸಿದರು.ಬಿಜೆಪಿಗೆ ರಾಜಕೀಯವಾಗಿ ಹೋರಾಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿಯೇ ಅದು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಸಂಸ್ಥೆಗಳನ್ನು ವಿಪಕ್ಷ ನಾಯಕರ ನಿವಾಸಗಳಿಗೆ ಕಳುಹಿಸುತ್ತಿದೆ ಎಂದು ಅವರು ಆರೋಪಿಸಿದರು.

SCROLL FOR NEXT