ದೇಶ

ಗುಜರಾತ್ ರಾಜ್ಯದಲ್ಲಿ ಶೇ 51ರಷ್ಟು ಮಹಿಳೆಯರ ಬಳಿ ಮೊಬೈಲ್ ಇಲ್ಲ, 567 ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ!

Ramyashree GN

ಅಹಮದಾಬಾದ್: ಗುಜರಾತ್‌ನಲ್ಲಿ ಶೇ 51 ಕ್ಕಿಂತ ಹೆಚ್ಚು ಮಹಿಳೆಯರು ಮೊಬೈಲ್ ಫೋನ್ ಹೊಂದಿಲ್ಲ. ರಾಜ್ಯದ ಒಟ್ಟು 18,425 ಹಳ್ಳಿಗಳಲ್ಲಿ 567 ಕ್ಕೂ ಹೆಚ್ಚು ಹಳ್ಳಿಗಳು ಮೊಬೈಲ್ ಸಂಪರ್ಕವಿಲ್ಲದೆ ಉಳಿದಿವೆ. ಅಲ್ಲದೆ, ರಾಷ್ಟ್ರವ್ಯಾಪಿ 5G ರೋಲ್‌ಔಟ್ ಆಗಿದ್ದರೂ, ಗುಜರಾತ್‌ನ 800 ಕ್ಕೂ ಹೆಚ್ಚು ಹಳ್ಳಿಗಳು 4G ಸೇವೆಯನ್ನು ಸಹ ಹೊಂದಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ ಸಂಸದ ಅನುಮುಲಾ ರೇವಂತ್ ರೆಡ್ಡಿ ಅವರ ಪ್ರಶ್ನೆಗೆ ಉತ್ತರವಾಗಿ ರಾಜ್ಯದ ಖೇಡಾ ಸಂಸದ ಮತ್ತು ಟೆಲಿಕಾಂ ರಾಜ್ಯ ಸಚಿವ ದೇವುಸಿಂಹ ಚೌಹಾಣ್ ಲೋಕಸಭೆಗೆ ಮಾಹಿತಿ ನೀಡಿದರು.

ಮೊಬೈಲ್ ಸಂಪರ್ಕದ ಕೊರತೆಯಿಂದ ಹೆಚ್ಚು ಬಾಧಿತವಾಗಿರುವುದು ಬುಡಕಟ್ಟು ಪ್ರದೇಶಗಳು. 'ಸರ್ಕಾರದ ಅನೇಕ ಪ್ರಯತ್ನಗಳ ಹೊರತಾಗಿಯೂ, ವಿಶೇಷವಾಗಿ ಗುಜರಾತ್‌ನ ಬುಡಕಟ್ಟು ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಇಂದಿಗೂ ಸಾಧಿಸಲಾಗಿಲ್ಲ.

ಬುಡಕಟ್ಟು ಪ್ರಾಬಲ್ಯದ ಡ್ಯಾಂಗ್ ಜಿಲ್ಲೆಯಲ್ಲಿ ಮೊಬೈಲ್ ಸಂಪರ್ಕವನ್ನು ಹೊಂದಿರದ ಸರಿಸುಮಾರು 90 ಹಳ್ಳಿಗಳನ್ನು ಹೊಂದಿದೆ. ಕಚ್ ಮತ್ತು ನರ್ಮದಾ ಜಿಲ್ಲೆಗಳಲ್ಲಿ ಕ್ರಮವಾಗಿ 84 ಮತ್ತು 64 ಗ್ರಾಮಗಳು ಸೇವೆಯನ್ನು ಹೊಂದಿಲ್ಲ ಎಂದು ದೂರಸಂಪರ್ಕ ವಲಯದ ತಜ್ಞ ವಿಶಾಲ್ ಜಾದವ್ ಹೇಳುತ್ತಾರೆ. 

ಕಡಿಮೆ ಮೊಬೈಲ್ ಫೋನ್ ಬಳಕೆ ಅಥವಾ ಜನರ ಆದಾಯ ಕಡಿಮೆ ಇರುವ ಪ್ರದೇಶಗಳಲ್ಲಿ ಖಾಸಗಿ ಕಂಪನಿಗಳು ಟವರ್‌ಗಳನ್ನು ಸ್ಥಾಪಿಸುವುದಿಲ್ಲ. ಆದರೆ, ಸರ್ಕಾರವು ತನ್ನದೇ ಆದ ಮೊಬೈಲ್ ಕಂಪನಿಯನ್ನು ಹೊಂದಿದೆ. ಹೀಗಿದ್ದರೂ, ಅವರು ಈ ಪ್ರದೇಶಗಳಿಗೆ ಏಕೆ ಸೇವೆಯನ್ನು ತರುವುದಿಲ್ಲ ಎಂಬುದು ಪ್ರಶ್ನೆ. 'ಡಿಜಿಟಲ್ ಇಂಡಿಯಾ'ದಲ್ಲಿ, ಮೊಬೈಲ್ ಫೋನ್ ಇಲ್ಲದ ಹಳ್ಳಿಯ ಬಗ್ಗೆ ಕೇಳುವುದು ವಿಚಿತ್ರವೆನಿಸುತ್ತದೆ' ಎಂದು ಜಾದವ್ ಹೇಳುತ್ತಾರೆ. 

ಲೋಕಸಭೆಯಲ್ಲಿ ದೂರಸಂಪರ್ಕ ಇಲಾಖೆಯು ಮಂಡಿಸಿದ ಮಾಹಿತಿ ಪ್ರಕಾರ, ರಾಷ್ಟ್ರೀಯ ಕುಟುಂಬ ಆರೋಗ್ಯ 2019-2021 ವರದಿಯನ್ನು ಉಲ್ಲೇಖಿಸಿ, ಗುಜರಾತ್‌ನಲ್ಲಿ 15-49 ವರ್ಷ ವಯಸ್ಸಿನ ಶೇ 48.80 ರಷ್ಟು ಮಹಿಳೆಯರು ಮಾತ್ರ ಸ್ವಂತ ಮೊಬೈಲ್ ಫೋನ್ ಹೊಂದಿದ್ದಾರೆ ಎಂದಿದೆ.

'ಗುಜರಾತ್‌ನ ಸಮಾಜದಲ್ಲಿ ಲಿಂಗ ಅಸಮಾನತೆ ದೊಡ್ಡ ಪ್ರಮಾಣದಲ್ಲಿ ಇದೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಮಹಿಳೆಯರಿಗೆ ಆಧುನಿಕ ತಂತ್ರಜ್ಞಾನವನ್ನು ನಿರಾಕರಿಸಲಾಗಿದೆ ಮತ್ತು ಅವರಿಗೆ ಯಾವುದೇ ರೀತಿಯ ಆದಾಯವಿಲ್ಲ' ಎಂದು ಅರ್ಥಶಾಸ್ತ್ರಜ್ಞೆ ಇಂದಿರಾ ಹಿರ್ವೆ ಹೇಳುತ್ತಾರೆ.

SCROLL FOR NEXT