ದೇಶ

ತ್ರಿಪುರಾ ವಿಧಾನಸಭೆ ಚುನಾವಣೆ: ಬಿಜೆಪಿ ಈ ಬಾರಿ ಸರ್ಕಾರ ರಚಿಸುತ್ತದೆ- ಸಿಎಂ ಮಾಣಿಕ್ ಸಹಾ ವಿಶ್ವಾಸ

Sumana Upadhyaya

ಅಗರ್ತಲಾ: ಪ್ರಸ್ತುತ ಬಿಜೆಪಿ ಆಡಳಿತವಿರುವ ತ್ರಿಪುರಾ ರಾಜ್ಯದಲ್ಲಿ ಇಂದು ಗುರುವಾರ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮುಖ್ಯಮಂತ್ರಿ ಮಾಣಿಕ್ ಸಹಾ ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ತಮ್ಮ ಕ್ಷೇತ್ರವಾದ ಟೌನ್ ಬೊರ್ಡೊವಾಲಿ ಕ್ಷೇತ್ರದಲ್ಲಿ ಹಕ್ಕು ಚಲಾಯಿಸಿದರು.

ತ್ರಿಪುರಾದಲ್ಲಿ 60 ಸದಸ್ಯ ಬಲದ ವಿಧಾನಸಭೆಗೆ ಗುರುವಾರ ಬೆಳಗ್ಗೆ 7 ಗಂಟೆಗೆ ಬಿಗಿ ಭದ್ರತೆಯ ನಡುವೆ ಮತದಾನ ಆರಂಭವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಗಿಟ್ಟೆ ಕಿರಣ್‌ಕುಮಾರ್ ದಿನಕರರಾವ್ ತಿಳಿಸಿದ್ದಾರೆ.

259 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಈಶಾನ್ಯ ರಾಜ್ಯದ 3,337 ಮತಗಟ್ಟೆಗಳಲ್ಲಿ ಒಟ್ಟು 28.13 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೊದಲ 30 ನಿಮಿಷಗಳ ಅವಧಿಯಲ್ಲಿ ರಾಜ್ಯದ ಯಾವುದೇ ಭಾಗದಿಂದ ಯಾವುದೇ ಅಹಿತಕರ ಘಟನೆ ಅಥವಾ ಇವಿಎಂ ತಾಂತ್ರಿಕ ದೋಷಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು.

ಮತದಾನ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಹಾ, ಶಾಂತಿಯುತ ಮತದಾನ ನಡೆಸಿಕೊಡಬೇಕೆಂದು ನಾನು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಮುಂದಿರುವ ಸವಾಲುಗಳೇನು ಎಂದು ಮತದಾರರು ಕೇಳುತ್ತಾರೆ. ಕಾಂಗ್ರೆಸ್-ಎಡಪಕ್ಷಗಳು ಈ ಬಾರಿ ಒಂದಾಗಿದ್ದು ಈ ಅಪವಿತ್ರ ಮೈತ್ರಿಕೂಟ ಚುನಾವಣೆ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ. 

ಮತ ಚಲಾಯಿಸುವುದಕ್ಕೆ ಮೊದಲು ನಾನು ಇಂದು ಬೆಳಗ್ಗೆ ದೇವರ ಮುಂದೆ ಪ್ರಾರ್ಥನೆ ಮಾಡಿ ಶಾಂತಿಯುತ ಮತದಾನ ಸಾಗುವಂತೆ ಪ್ರಾರ್ಥನೆ ಮಾಡಿಕೊಂಡೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಬಂದು ಮತದಾನ ಮಾಡುತ್ತಿದ್ದಾರೆ. ಈ ಬಾರಿ ಕೂಡ ಬಿಜೆಪಿ ಬಹುಮತ ಗಳಿಸಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ 60 ವಿಧಾನಸಭಾ ಸ್ಥಾನಗಳಿದ್ದು, ಅದರಲ್ಲಿ 20 ಎಸ್‌ಟಿ ಮತ್ತು 10 ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ITFT) ಜೊತೆ ಮೈತ್ರಿ ಮುಂದುವರಿಸಿರುವ ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಹಾಗೂ ಐಟಿಎಫ್ ಟಿ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಎಡಪಕ್ಷಗಳು ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ಬಿಜೆಪಿ, ಬುಡಕಟ್ಟು ಮೂಲದ ತಿಪ್ರಾ ಮೋಥಾ ಮತ್ತು ಎಡಪಕ್ಷ ಹಾಗೂ ಕಾಂಗ್ರೆಸ್ ನಡುವೆ 42 ಸ್ಥಾನಗಳಲ್ಲಿ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು ಮತ್ತು “ಚಲೋ ಪಲ್ಟೈ” (ಬದಲಾವಣೆ ಮಾಡೋಣ) ಎಂಬ ಘೋಷಣೆಯ ಮೇಲೆ 25 ವರ್ಷಗಳ ಎಡಪಕ್ಷದ ಆಡಳಿತವನ್ನು ಕೊನೆಗೊಳಿಸಿತ್ತು. 

ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರ ನಿರಂಕುಶಾಧಿಕಾರದ ಕಾರ್ಯವೈಖರಿಯಿಂದ ಬಿಜೆಪಿ ನಿಧಾನವಾಗಿ ವಿಭಜನೆಯಾಗುತ್ತಿದೆ. ದೇಬ್ ತನ್ನ ವಿಲಕ್ಷಣ ಹೇಳಿಕೆಗಳಿಗಾಗಿ ಹೆಚ್ಚು ಸುದ್ದಿಯಲ್ಲಿದ್ದರು. ಕಳೆದ ವರ್ಷ ಮೇನಲ್ಲಿ ಮಾಣಿಕ್ ಸಹಾ ಅವರನ್ನು ಬದಲಾಯಿಸಲಾಯಿತು ಆದರೆ ಅದು ತುಂಬಾ ತಡವಾಗಿತ್ತು. ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಐಪಿಎಫ್‌ಟಿಯ ಕೆಲವು ಶಾಸಕರ ನಿರ್ಗಮನದಿಂದ ಬಿಜೆಪಿ ವಿರೋಧಿ ಅಲೆ ಸ್ಪಷ್ಟವಾಗಿದೆ. ರಾಜವಂಶಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೆಬ್ಬರ್ಮಾ ನೇತೃತ್ವದ ಟಿಪ್ರಾ ಮೋಥಾ, ತ್ರಿಪುರಾ ಪಕ್ಷವಾಗಿ ಹೊರಹೊಮ್ಮಲು ಬಯಸುತ್ತಿರುವ ಕಾರಣ ಸಾಮಾನ್ಯ ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ.

SCROLL FOR NEXT