ದೇಶ

ಉಕ್ರೇನ್ ಯುದ್ಧ ಕೊನೆಗಾಣಿಸುವುದಕ್ಕೆ ಸಹಕರಿಸಲು ಭಾರತ ಸಿದ್ಧವಿದೆ: ಪ್ರಧಾನಿ ಮೋದಿ

Srinivas Rao BV

ನವದೆಹಲಿ: ಉಕ್ರೇನ್ ಸಂಘರ್ಷವನ್ನು ಮಾತುಕತೆ, ರಾಜತಾಂತ್ರಿಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಭಾರತ ಒತ್ತಾಯಿಸುತ್ತಿದೆ,  ಯಾವುದೇ ರೀತಿಯ ಶಾಂತಿ ಪ್ರಕ್ರಿಯೆಗೆ ಕೊಡುಗೆ ನೀಡುವುದಕ್ಕೆ ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
ಜರ್ಮನ್ ಚಾನ್ಸಿಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವಿಸ್ತೃತ ದ್ವಿಪಕ್ಷೀಯ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತ ಶಾಂತಿ ಪ್ರಕ್ರಿಯೆಗೆ ಸಿದ್ಧವಿದೆ ಎಂದು ಹೇಳಿದ್ದಾರೆ. 

ಕೋವಿಡ್-19 ಪ್ಯಾಂಡಮಿಕ್ ಹಾಗೂ ಉಕ್ರೇನ್ ಸಂಘರ್ಷದ ಪರಿಣಾಮವನ್ನು ಇಡೀ ಜಗತ್ತು ಎದುರಿಸಿದೆ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಆ ಪರಿಣಾಮಗಳಿಂದ ತತ್ತರಿಸಿವೆ ಎಂದಿರುವ ಪ್ರಧಾನಿ ಮೋದಿ, ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದದ ವಿರುದ್ಧ ಹೋರಾಡಲು ಭಾರತ-ಜರ್ಮನಿಯ ನಡುವೆ ಸಕ್ರಿಯವಾದ ಸಹಕಾರವಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ನಿರ್ದಿಷ್ಟ ಕ್ರಮ ಅಗತ್ಯ ಎಂಬುದನ್ನು ಉಭಯ ರಾಷ್ಟ್ರಗಳೂ ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.

ಸ್ಕೋಲ್ಜ್  ಮಾತನಾಡಿ, ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣದ ಪರಿಣಾಮವಾಗಿ ಜಗತ್ತು ಬಳಲುತ್ತಿದೆ ಮತ್ತು ಹಿಂಸೆಯ ಮೂಲಕ ಗಡಿಗಳನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದು, ಉಕ್ರೇನ್‌ನಲ್ಲಿನ ಯುದ್ಧವು ಅಪಾರ ನಷ್ಟ ಮತ್ತು ವಿನಾಶಕ್ಕೆ ಕಾರಣವಾಗಿದೆ, "ಇದು ಒಂದು ದುರಂತ" ಎಂದು ಅವರು ಹೇಳಿದ್ದಾರೆ.
 
"ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದ ದೇಶಗಳು ಆಕ್ರಮಣಕಾರಿ ಯುದ್ಧದಿಂದ ಬಲವಾದ ಮತ್ತು ಋಣಾತ್ಮಕವಾದ ಪರಿಣಾಮ ಎದುರಿಸುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು" ಎಂದು ಸ್ಕೋಲ್ಜ್ ಹೇಳಿದ್ದಾರೆ. 

SCROLL FOR NEXT