ದೇಶ

ನಮ್ಮ ಶಿಕ್ಷಣ ಸಂಸ್ಥೆಗಳು ಎಲ್ಲಿ ಎಡವುತ್ತಿವೆ; ವಿದ್ಯಾರ್ಥಿಗಳ ಆತ್ಮಹತ್ಯೆ ಅಚ್ಚರಿ ಮೂಡಿಸಿದೆ: ಸಿಜೆಐ

Lingaraj Badiger

ಹೈದರಾಬಾದ್: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಶನಿವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಸಂತ್ರಸ್ತರ ದುಃಖಿತ ಕುಟುಂಬಗಳಿಗೆ ತಮ್ಮ ಹೃದಯ ಮಿಡಿಯುತ್ತದೆ ಎಂದು ಹೇಳಿದ್ದಾರೆ.

ನಮ್ಮ ಶಿಕ್ಷಣ ಸಂಸ್ಥೆಗಳು ಎಲ್ಲಿ ಎಡವುತ್ತಿವೆ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ತಮಗೆ ಅಚ್ಚರಿ ಮೂಡಿಸಿದೆ ಎಂದು ಸಿಜೆಐ ಹೇಳಿದ್ದಾರೆ.

ಇತ್ತೀಚೆಗೆ ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಉಲ್ಲೇಖಿಸಿದ ಅವರು, ಅಂಚಿನಲ್ಲಿರುವ ಸಮುದಾಯಗಳ ಸಂತ್ರಸ್ತರನ್ನು ಒಳಗೊಂಡ ಇಂತಹ ಘಟನೆಗಳು ಸಾಮಾನ್ಯವಾಗುತ್ತಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್(ನಲ್ಸಾರ್) ನಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಸಿಜೆಐ, ಸಾಮಾಜಿಕ ಬದಲಾವಣೆಗಾಗಿ ಭಾರತದ ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಗಳ ಒಳಗೆ ಮತ್ತು ಹೊರಗೆ ಸಮಾಜದೊಂದಿಗೆ ಸಂವಾದ ನಡೆಸುವ ನಿರ್ಣಾಯಕ ಪಾತ್ರವನ್ನು ಹೊಂದಿದ್ದಾರೆ ಎಂದು ಹೇಳಿದರು.

"ಇತ್ತೀಚೆಗಷ್ಟೇ ನಾನು ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಬಗ್ಗೆ ಓದಿದ್ದೇನೆ. ಇದು ಕಳೆದ ವರ್ಷ ಒಡಿಶಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ ಆದಿವಾಸಿ ವಿದ್ಯಾರ್ಥಿಯ ಆತ್ಮಹತ್ಯೆಯನ್ನು ನೆನಪಿಸಿತು" ಎಂದರು.

"ನನ್ನ ಹೃದಯ ಈ ವಿದ್ಯಾರ್ಥಿಗಳ ಕುಟುಂಬದ ಸದಸ್ಯರಿಗಾಗಿ ಮಿಡಿಯುತ್ತದೆ. ಆದರೆ ನಮ್ಮ ಶಿಕ್ಷಣ ಸಂಸ್ಥೆಗಳು ಎಲ್ಲಿ ಎಡವುತ್ತಿವೆ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಿರುವುದು ಅಚ್ಚರಿ ಮೂಡಿಸಿದೆ" ಎಂದಿದ್ದಾರೆ.

ಗುಜರಾತ್ ಮೂಲದ ಪ್ರಥಮ ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರು ಕಳೆದ ಫೆಬ್ರವರಿ 12 ರಂದು ಐಐಟಿ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

SCROLL FOR NEXT