ದೇಶ

2022ರಲ್ಲಿ ಮಹಿಳೆಯರ ವಿರುದ್ದ 31,000 ಅಪರಾಧ ಪ್ರಕರಣಗಳು ದಾಖಲು: ರಾಷ್ಟ್ರೀಯ ಮಹಿಳಾ ಆಯೋಗ

Ramyashree GN

ನವದೆಹಲಿ: 2022ರಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧಗಳಿಗೆ ಸಂಬಂಧಿಸಿದಂತೆ ಸುಮಾರು 31,000 ದೂರುಗಳನ್ನು ಸ್ವೀಕರಿಸಲಾಗಿದ್ದು, ಇದು 2014 ರಿಂದೀಚೆಗೆ ಅತಿ ಹೆಚ್ಚು ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ತಿಳಿಸಿದೆ.

ಎನ್‌ಸಿಡಬ್ಲ್ಯು , 2021 ರಲ್ಲಿ 30,864 ದೂರುಗಳನ್ನು ಸ್ವೀಕರಿಸಿದ್ದರೆ, 2022 ರಲ್ಲಿ 30,957 ದೂರುಗಳನ್ನು ಸ್ವೀಕರಿಸಿದೆ.

ಕಳೆದ ವರ್ಷ ದಾಖಲಾಗಿರುವ 30,957 ದೂರುಗಳ ಪೈಕಿ, ಗರಿಷ್ಠ 9,710 ಪ್ರಕರಣಗಳು ಮಹಿಳೆಯು ಘನತೆಯಿಂದ ಬದುಕುವ ಹಕ್ಕಿಗೆ ಭಾವನಾತ್ಮಕವಾಗಿ ಧಕ್ಕೆಗೆ ಸಂಬಂಧಿಸಿದೆ. ನಂತರ ಗೃಹ ಹಿಂಸೆಗೆ ಸಂಬಂಧಿಸಿದ 6,970 ಮತ್ತು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದವು 4,600 ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಸುದ್ದಿಸಂಸ್ಥೆ ಪಿಟಿಐಗೆ ಲಭ್ಯವಾಗಿದೆ.

ಶೇ 54.5ರಷ್ಟು (16,872) ದೂರುಗಳು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದಿಂದ ವರದಿಯಾಗಿವೆ. ದೆಹಲಿಯಲ್ಲಿ 3,004 ದೂರುಗಳು ದಾಖಲಾಗಿದ್ದು, ಮಹಾರಾಷ್ಟ್ರ (1,381), ಬಿಹಾರ (1,368) ಮತ್ತು ಹರಿಯಾಣ (1,362) ನಂತರದ ಸ್ಥಾನದಲ್ಲಿವೆ.

ಅಂಕಿಅಂಶಗಳ ಪ್ರಕಾರ, ಘನತೆಯಿಂದ ಬದುಕುವ ಹಕ್ಕು ಮತ್ತು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಹೆಚ್ಚಿನ ದೂರುಗಳು ಉತ್ತರ ಪ್ರದೇಶದಿಂದ ಬಂದಿವೆ.

ಆಯೋಗವು 2014ರಲ್ಲಿ 33,906 ದೂರುಗಳನ್ನು ಸ್ವೀಕರಿಸಿತ್ತು. ಅಲ್ಲಿಂದೀಚೆಗೆ 2022ರಲ್ಲಿ ಸ್ವೀಕರಿಸಿದ ಪ್ರಕರಣಗಳು ಅಧಿಕ.

ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಕಿರುಕುಳದ ಅಪರಾಧಕ್ಕೆ ಸಂಬಂಧಿಸಿದಂತೆ 2,523 ದೂರುಗಳು, 1,701 ಅತ್ಯಾಚಾರ ಮತ್ತು ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿವೆ. 1,623 ದೂರುಗಳು ಮಹಿಳೆಯರ ವಿರುದ್ಧ ಪೊಲೀಸ್ ನಿರಾಸಕ್ತಿ ಮತ್ತು 924 ದೂರುಗಳು ಸೈಬರ್ ಅಪರಾಧಗಳಿಗೆ ಸಂಬಂಧಿಸಿವೆ.

SCROLL FOR NEXT