ದೇಶ

ದೆಹಲಿ ಅಪಘಾತ ಪ್ರಕರಣಕ್ಕೆ ತಿರುವು: ಸ್ಕೂಟಿಯಲ್ಲಿ ಯುವತಿ ಜತೆಗಿದ್ದಳು ಗೆಳತಿ, ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆ!

Manjula VN

ನವದೆಹಲಿ: ದೆಹಲಿಯ ಸುಲ್ತಾನಪುರಿಯಲ್ಲಿ ಭಾನುವಾರ ಸಂಭವಿಸಿದ ಕಾರು-ಸ್ಕೂಟಿ ಅಪಘಾತ ಪ್ರಕರಣಕ್ಕೆ ಇದೀಗ ಹೊಸ ತಿರುವೊಂದು ಸಿಕ್ಕಿದೆ. ಅಪಘಾತ ಸಂದರ್ಭದಲ್ಲಿ ಮೃತಳಾದ ಯುವತಿಯ ಜತೆಯಲ್ಲಿ ಮತ್ತೊಬ್ಬ ಯುವತಿ ಇದ್ದಳು ಎಂಬುದಾಗಿ ಹೇಳಲಾಗುತ್ತಿದೆ.

ಮೃತಳಾದ ಯುವತಿ ಹಾಗೂ ಆಕೆಯ ಸ್ನೇಹಿತೆ ಶನಿವಾರ ರಾತ್ರಿ ಹೋಟೆಲ್ ಒಂದರಲ್ಲಿ ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆಂದು ತೆರಳಿದ್ದರು. ಅಲ್ಲಿಂದ ಭಾನುವಾರ ಮುಂಜಾನೆ ಇಬ್ಬರೂ ಒಟ್ಟಿಗೆ ಸ್ಕೂಟಿಯಲ್ಲಿ ಬಂದಿದ್ದಾರೆ. ಆಗ ಈ ಅಪಘಾತ ಸಂಭವಿಸಿದೆ.

ಒಬ್ಬ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಕೆ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನೊಬ್ಬ ಯುವತಿಯ ಕಾಲು ಕಾರಿನ ಚಕ್ರಕ್ಕೆ ಸಿಲುಕಿಕೊಂಡ ಹಿನ್ನೆಲೆ ಆಕೆಯನ್ನು ಕಾರು ಎಳೆದುಕೊಂಡು ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ತನಿಖೆಯ ಭಾಗವಾಗಿ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಸ್ಥಳೀಯರೂ ಕೂಡ ಸ್ಕೂಟಿಯಲ್ಲಿ ಮತ್ತೊಬ್ಬ ಯುವತಿ ಇದ್ದಳು ಎಂದು ಹೇಳಿದ್ದಾರೆ. ಈ ಸಂಬಂಧ ಸ್ಕೂಟಿಯಲ್ಲಿದ್ದ ಯುವತಿ ಹಾಗೂ ಪಾರ್ಟಿಯಲ್ಲಿದ್ದ ಅವರ ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸಿ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ 12 ಗಂಟೆಗೆ ಬಂದ ಶಾಲಿನಿ ಸಿಂಗ್‌ ಅವರೊಂದಿಗೆ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಿತೇಂದರ್ ಕುಮಾರ್ ಮೀನಾ ಮತ್ತು ಸಿಬ್ಬಂದಿ ಇದ್ದರು. ಅಪಘಾತ ನಡೆದ ಸ್ಥಳ ಮತ್ತು ಯುವತಿಯ ದೇಹವನ್ನು 12 ಕಿ.ಮೀ ವರೆಗೆ ಎಳೆದೊಯ್ದ ಮಾರ್ಗವನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದರು.

ಕೇಂದ್ರ ಗೃಹ ಇಲಾಖೆಯು ಪ್ರಕರಣದ ತನಿಖೆಗೆ ಸಮಿತಿ ರಚಿಸಿದೆ. ಶಾಲಿನಿ ಸಿಂಗ್ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅವರು ಮಂಗಳವಾರ ಸಂಜೆಯೊಳಗೆ ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಬೇಕಾಗಿದೆ.

ಈ ನಡುವೆ ಮೃತ ಯುವತಿಯ ಕುಟುಂಬಸ್ಥರು ಅಪಘಾತದ ಬಗ್ಗೆ ಹಲವಾರು ಅನುಮಾನಗಳನ್ನು ಹೊರಹಾಕಿದ್ದಾರೆ.

ಯುವತಿಯ ಶವ ರಸ್ತೆಗೆ ಬಿದ್ದಾಗ ಆಕೆಯ ದೇಹದ ಮೇಲೆ ಒಂದು ಚೂರೂ ಬಟ್ಟೆ ಇರಲಿಲ್ಲ. ಅಪಘಾತವಾಗಿದ್ದೇ ಆದರೆ, ಬಟ್ಟೆ ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದ್ದಾರೆ. ಇದರ ಹಿಂದೆ ಬೇರೆಯವರ ಕೈವಾಡವಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

SCROLL FOR NEXT