ದೇಶ

ಕಾಂಜಾವಾಲಾ ಮಹಿಳೆ ಸಾವು ಪ್ರಕರಣ: ಹೋಟೆಲ್ ಹೊರಗೆ ಸ್ನೇಹಿತೆಯೊಂದಿಗೆ ಸಂತ್ರಸ್ತೆ ಜಗಳ- ಪೊಲೀಸ್

Srinivasamurthy VN

ನವದೆಹಲಿ: ದೆಹಲಿಯ ಹೊರವಲಯದ ಕಾಂಜಾವಾಲಾ ಮಹಿಳೆ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಾವಿಗೀಡಾದ ಮಹಿಳೆ ಹೋಟೆಲ್ ಹೊರಗೆ ಸ್ನೇಹಿತೆಯೊಂದಿಗೆ ಜಗಳವಾಡಿದ್ದರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ದೆಹಲಿಯ ಹೊರಭಾಗದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಹಲವು ಕಿಲೋಮೀಟರ್‌ಗಳವರೆಗೆ ಮಹಿಳೆಯ ದೇಹ ಎಳೆದೊಯ್ದು ಹತ್ಯೆಗೀಡಾದ 20ರ ಹರೆಯದ ಮಹಿಳೆಯ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಆದರೆ ಅಚ್ಚರಿ ರೀತಿಯಲ್ಲಿ ಈ ವಿದ್ರಾವಕ ಘಟನೆಗೂ ಮುನ್ನ ಸಂತ್ರಸ್ಥೆ ತನ್ನದೇ ಸ್ನೇಹಿತೆಯೊಂದಿಗೆ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೊಸ ವರ್ಷಾಚರಣೆ ಬಳಿಕ ಹೊಟೇಲ್‌ನ ಹೊರಗೆ ಮಹಿಳೆ ಮತ್ತು ಆಕೆಯ ಸ್ನೇಹಿತೆ ಜಗಳ ಮಾಡುತ್ತಿರುವ ವಿಡಿಯೋಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಹೊಸ ವರ್ಷವನ್ನು ಆಚರಿಸಿದ ನಂತರ ಮಹಿಳೆ ಹೋಟೆಲ್ ಹೊರಗೆ ಮಹಿಳೆಯೊಂದಿಗೆ ಜಗಳವಾಡುತ್ತಿರುವುದನ್ನು ಪೊಲೀಸರು ಮರುಪಡೆಯಲಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. 

ಸುಲ್ತಾನ್‌ಪುರಿ ನಿವಾಸಿಯಾಗಿರುವ ಸಂತ್ರಸ್ಥ ಮಹಿಳೆ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು ಮತ್ತು ಘಟನೆ ಸಂಭವಿಸಿದಾಗ ಹೊಸ ವರ್ಷದ ಮುನ್ನಾದಿನದಂದು ಕೆಲಸಕ್ಕೆ ಹೋಗಿದ್ದರು. ಡಿಸೆಂಬರ್ 31 ರಂದು ಹೊಸ ವರ್ಷಾಚರಣೆ ಬಳಿಕ ಸಂತ್ರಸ್ಥೆ ಮತ್ತು ಆಕೆಯ ಸ್ನೇಹಿತೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಕಾರೊಂದು ಢಿಕ್ಕಿಯಾಗಿತ್ತು. ಈ ವೇಳೆ ಮಹಿಳೆ ಕಾರಿನ ಕೆಳಗೆ ಸಿಲುಕಿದ್ದರೆ, ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಅಲ್ಲಿಂದ ಪರಾರಿಯಾಗಿದ್ದರು. ಆದರೆ ಇದಾವುದರ ಪರಿವೇ ಇಲ್ಲದ ಕಾರಿನಲ್ಲಿದ್ದ ಐದು ಮಂದಿಯ ತಂಡ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರು. ಆದರೆ ಕಾರಿನ ಚಾರ್ಸಿಗೆ ಮಹಿಳೆಯ ಕಾಲು ಸಿಲುಕಿ ಆಕೆ ಕಾರಿನ ಅಡಿಗೆ ಸಿಲುಕಿದ್ದರು.

ಈ ವೇಳೆ ಕಾರು ಆಕೆಯನ್ನು ಸುಮಾರು 12ಕಿ.ಮೀ ಎಳೆದೊಯ್ದಿದ್ದು, ಸ್ಥಳೀಯರು ಇದನ್ನು ನೋಡಿ ಕಾರನ್ನು ನಿಲ್ಲಿಸುವ ಹೊತ್ತಿಗೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಅಲ್ಲದೆ ಆಕೆಯ ಮೈ ಮೇಲೆ ತುಂಡು ಬಟ್ಟೆ ಕೂಡ ಇಲ್ಲದಂತಾಗಿತ್ತು. ಪೊಲೀಸರ ಪ್ರಕಾರ ಆಕೆ ಕಂಝಾವಾಲಾದ ರಸ್ತೆಯಲ್ಲಿ ಬೆತ್ತಲೆಯಾಗಿ ಪತ್ತೆಯಾಗಿದ್ದಳು ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿದ್ದು, ದೆಹಲಿ ಪೊಲೀಸರು ವಿಶೇಷ ಆಯುಕ್ತ ಶಾಲಿನಿ ಸಿಂಗ್ ನೇತೃತ್ವದ ತನಿಖಾ ಸಮಿತಿಯನ್ನು ಸಹ ರಚಿಸಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ತನಿಖೆಯ ವರದಿಯನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT