ದೇಶ

ದೆಹಲಿ: ಡಿಟಿಸಿ ಬಸ್ ನಲ್ಲಿ ಮಹಿಳೆಗೆ ಖಾಸಗಿ ಅಂಗ ಪ್ರದರ್ಶಿಸಿ ವ್ಯಕ್ತಿಯ ಅಸಭ್ಯ ವರ್ತನೆ; ಆದರೂ ದಾಖಲಾಗಿಲ್ಲ ಪ್ರಕರಣ!

Srinivas Rao BV

ನವದೆಹಲಿ: 2023 ರ ಆರಂಭದಿಂದಲೂ ದೇಶದಲ್ಲಿ ಒಂದಲ್ಲಾ ಒಂದು ವಿಲಕ್ಷಣ ಘಟನೆಗಳು ವರದಿಯಾಗುತ್ತಿವೆ. ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿ ಒಂದಿಬ್ಬರು ವಿಕೃತಿ ಮೆರೆದಿದ್ದರೆ, ದೆಹಲಿಯ ಸ್ಥಳೀಯ ಸಾರಿಗೆಯಲ್ಲಿ ವ್ಯಕ್ತಿಯೋರ್ವ ಮಹಿಳೆಗೆ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. 

ಈ ರೀತಿ ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಬಸ್ ನ ಮಾರ್ಷಲ್ ಸಂದೀಪ್ ಚಿಕ್ಖಾರ ಬಂಧಿಸಿದ್ದಾರೆ. 

ವ್ಯಕ್ತಿ ಈ ರೀತಿ ಅಸಭ್ಯ ವರ್ತನೆ ತೋರಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ವೀಡಿಯೋ ಕ್ಲಿಪ್ ನಲ್ಲಿ ಮಾರ್ಷಲ್ ತಾವು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದು ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ರೀತಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಯನ್ನು ಬಿಹಾರ ಮೂಲದ ಝಾಕಿರ್ ಎಂದು ಗುರುತಿಸಲಾಗಿದ್ದು, ದೆಹಲಿಯ ಈಶಾನ್ಯ ಭಾಗದ ಖಜುರಿ ಪ್ರದೇಶದ ನಿವಾಸಿಯಾಗಿದ್ದಾನೆ.
 
ವೀಡಿಯೋ ವೈರಲ್ ಆಗತೊಡಗುತ್ತಿದ್ದಂತೆಯೇ ಪೊಲೀಸರು ಸಂತ್ರಸ್ತ ಮಹಿಳೆಯನ್ನು ವಿಚಾರಣೆ ಮಾಡಿದ್ದಾರೆ ಆದರೆ ಮಹಿಳೆ ಯಾವುದೇ ರೀತಿಯ ದೂರು ನೀಡಲು ನಿರಾಕರಿಸಿದ್ದಾರೆ.

ಡಿಟಿಸಿ ಬಸ್ ನಲ್ಲಿ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿತ್ತು. ಇದು ಉತ್ತರ ರೋಹಿಣಿ ಪೊಲೀಸ್ ಠಾಣೆಯ ಗಮನಕ್ಕೂ ಬಂದಿದೆ. ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿ ಅದರ ಜವಾಬ್ದಾರಿಯನ್ನು ಮಹಿಳಾ ಸಬ್ ಇನ್ಸ್ ಪೆಕ್ಟರ್ ಗೆ ವಹಿಸಲಾಗಿದೆ. ಹೇಳಿಕೆ ಪಡೆಯುವುದಕ್ಕೆ ಮಹಿಳೆಯನ್ನು ಸಂಪರ್ಕಿಸಲಾಯಿತು, ಆದರೆ ಘಟನೆಯ ಬಗ್ಗೆ ಆಕೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಮುಂದೆ ಯಾವುದೇ ದೂರು ಬಂದಲ್ಲಿ ದೂರು ದಾಖಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT