ದೇಶ

ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂ ಉದ್ಘಾಟಿಸಿದ ಒಡಿಶಾ ಸಿಎಂ; ವಿಶ್ವಕಪ್ ಗೆದ್ದರೆ ಪ್ರತಿ ಕ್ರೀಡಾಪಟುವಿಗೂ 1 ಕೋಟಿ ರೂ. ಬಹುಮಾನ ಘೋಷಣೆ

Srinivas Rao BV

ರೂರ್ಕೆಲಾ: ಒಡಿಶಾ ಸಿಎಂ ನವೀನ್ ಪಟ್ನಾಯಕ್ ಗುರುವಾರ (ಜ.05) ರಂದು ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂ ನ್ನು ರೂರ್ಕೆಲಾದಲ್ಲಿ ಉದ್ಘಾಟಿಸಿದ್ದಾರೆ. 

ಜ.13 ರಂದು ಎಫ್ಐಹೆಚ್ ಹಾಕಿ ಪುರುಷರ ವಿಶ್ವಕಪ್ ಪಂದ್ಯ ನಡೆಯಲಿದ್ದು, ಇದಕ್ಕೂ ಕೆಲವೇ ದಿನಗಳ ಮುನ್ನ ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಮ್ ಉದ್ಘಾಟನೆಗೊಂಡಿದೆ. 

ಸುಮಾರು 260 ಕೋಟಿ ರೂಪಾಯಿ ವೆಚ್ಚದಲ್ಲಿ, ದಾಖಲೆಯ 15 ತಿಂಗಳಲ್ಲಿ  ವಿಶ್ವದರ್ಜೆಯ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಮ್ (ಬಿಎಂಹೆಚ್ಎಸ್) ನ್ನು ಸುಮಾರು 20,000 ಮಂದಿ ವೀಕ್ಷಿಸುವ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿದೆ.

ಹೊಸದಾಗಿ ನಿರ್ಮಿಸಲಾಗಿರುವ ಸ್ಟೇಡಿಯಂ ನಲ್ಲಿ 44 ಪಂದ್ಯಗಳ ಪೈಕಿ 20 ಪಂದ್ಯಗಳನ್ನಾಡಲಾಗುತ್ತದೆ. ಫೈನಲ್ಸ್ ಸೇರಿ ಉಳಿದ 24 ಪಂದ್ಯಗಳನ್ನು ಭುವನೇಶ್ವರದ ಕಾಳಿಂಗ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ.
 
ಸ್ಟೇಡಿಯಮ್ ಕ್ಯಾಂಪಸ್ ನಲ್ಲಿ  85 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ವಿಶ್ವಕಪ್ ಗ್ರಾಮವನ್ನೂ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು.  ಈ ಸಂಕೀರ್ಣದಲ್ಲಿ ಅಭ್ಯಾಸ ಪಿಚ್, ಫಿಟ್ನೆಸ್ ಕೇಂದ್ರ, ಹೈಡ್ರೋಥೆರೆಪಿ ಪೂಲ್, ಡ್ರೆಸ್ಸಿಂಗ್ ಹಾಗೂ ಬದಲಾವಣೆ ಕೊಠಡಿ 225 ಕೊಠಡಿಗಳನ್ನು ಹೊಂದಿರುವ ವಸತಿ ಸಂಕೀರ್ಣಗಳಿದ್ದು, ಕೇವಲ 9 ತಿಂಗಳ ಅವಧಿಯಲ್ಲಿ ನಿರ್ಮಾಣಗೊಂಡಿದ್ದು 400 ಕ್ರೀಡಾಪಟುಗಳಿಗೆ ಆಗುವ ವ್ಯವಸ್ಥೆಯನ್ನು ಹೊಂದಿರುವ ಪಂಚತಾರ ಸೌಲಭ್ಯಗಳಿವೆ.

ಹಾಕಿ ಇಂಡಿಯಾ ಇಲ್ಲಿ ಸೇವೆಗಳನ್ನು ಒದಗಿಸುವುದಕ್ಕೆ ತಾಜ್ ಗ್ರೂಪ್ ನ್ನು ಕರೆತರಲಾಗಿದೆ. ಉದ್ಘಾಟನೆಯ ಬಳಿಕ ಭಾರತೀಯ ಹಾಕಿ ತಂಡದೊಂದಿಗೆ ಸಂವಹನ ನಡೆಸಿದ ಒಡಿಶಾ ಸಿಎಂ ವಿಶ್ವಕಪ್ ಗೆದ್ದರೆ ಪ್ರತಿ ಕ್ರೀಡಾಪಟುವಿಗೂ ತಲಾ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. 

SCROLL FOR NEXT