ದೇಶ

ಉತ್ತರ ಪ್ರದೇಶ: ಶಾಲಾ ಬಾಲಕನಿಗೆ ಕಾರು ಡಿಕ್ಕಿ, 1 ಕಿ.ಮೀ ಎಳೆದೊಯ್ದ ಪಾಪಿ ಚಾಲಕ!

Lingaraj Badiger

ಹರ್ದೋಯ್: ದೆಹಲಿಯ ಕಾಂಜಾವಾಲಾ ಅಮಾನವೀಯ ಘಟನೆಯಂತೆಯೇ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಕಾರಿನಡಿ ಸಿಲುಕಿದ 15 ವರ್ಷದ ಶಾಲಾ ಬಾಲಕನನ್ನು ಒಂದು ಕಿಲೋಮೀಟರ್ ಎಳೆದೊಯ್ದ ಘಟನೆ ನಡೆದಿದೆ.

9ನೇ ತರಗತಿಯ ವಿದ್ಯಾರ್ಥಿ ಕೇತನ್ ಕುಮಾರ್ ಎಂಬಾತ ತನ್ನ ಸೈಕಲ್‌ನಲ್ಲಿ ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಬಿಳಿ ಬಣ್ಣದ ವ್ಯಾಗನರ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಾಲಕನ ಕಾಲು ಕಾರಿನ ಹಿಂಬದಿಯಲ್ಲಿ ಸಿಲುಕಿಕೊಂಡಿದ್ದರೂ ಚಾಲಕ ಕಾರು ನಿಲ್ಲಿಸದೆ 1 ಕಿ.ಮೀ.ವರೆಗೆ ಚಲಾಯಿಸಿದ್ದಾನೆ.

ಚಾಲಕ ಸ್ಥಳದಿಂದ ಪರಾರಿಯಾಗುವ ಪ್ರಯತ್ನದಲ್ಲಿ, ಪ್ರತ್ಯಕ್ಷದರ್ಶಿಗಳು ಕಾರನ್ನು ನಿಲ್ಲಿಸುವಂತೆ ಕೂಗಿದರೂ ಸಹ ಕಾರು ನಿಲ್ಲಿಸದೆ ವಿದ್ಯಾರ್ಥಿಯನ್ನು ಎಳೆದೊಯ್ದಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ, ಕೇತನ್ ತನ್ನ ಕಾಲನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಅಂತಿಮವಾಗಿ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಕಾರು ನಿಲ್ಲಿಸಿದ ನಂತರ ಕೇತನ್ ಅವರನ್ನು ರಕ್ಷಿಸಲಾಗಿದೆ. ಆಕ್ರೋಶಗೊಂಡ ಜನರ ಗುಂಪು ಚಾಲಕನನ್ನು ಹಿಡಿದು ದೊಣ್ಣೆಯಿಂದ ಥಳಿಸಿದೆ. ಕಾರನ್ನು ಕೂಡ ಧ್ವಂಸಗೊಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೋಪಗೊಂಡ ಜನರಿಂದ ಚಾಲಕನನ್ನು ರಕ್ಷಿಸಿ, ವಶಕ್ಕೆ ಪಡೆದಿದ್ದಾರೆ.

ಗಮನಾರ್ಹ ಎಂದರೆ, ಇದೇ ತಿಂಗಳಲ್ಲಿ ವರದಿಯಾದ ಮೂರನೇ ಅಮಾನವೀಯ ಘಟನೆ ಇದಾಗಿದೆ. ಎರಡು ದಿನಗಳ ಹಿಂದೆ, ದೆಹಲಿ ಕಂಜಾವಾಲಾ ಭಯಾನಕ ಸುದ್ದಿ ಮಾಡುತ್ತಿದ್ದಾಗ ನೋಯ್ಡಾದಲ್ಲಿ ಫೂಡ್ ಡೆಲಿವರಿ ಯುವಕನ ಬೈಕ್ ಕಾರೊಂದು ಡಿಕ್ಕಿ ಹೊಡೆದು, ಸುಮಾರು 500 ಮೀಟರ್‌ಗಳವರೆಗೆ ಎಳೆದೊಯ್ದು ಸಾವನ್ನಪ್ಪಿದ್ದರು.

SCROLL FOR NEXT