ದೇಶ

ಅಹಮದಾಬಾದ್: ವಸತಿ ಕಟ್ಟಡದ 7ನೇ ಮಹಡಿಯ ಫ್ಲಾಟ್‌ನಲ್ಲಿ ಬೆಂಕಿ ಅವಘಡ, 17 ವರ್ಷದ ಬಾಲಕಿ ಸಾವು

Ramyashree GN

ಅಹಮದಾಬಾದ್: ಗುಜರಾತ್‌ನಲ್ಲಿ ಶನಿವಾರ ವಸತಿ ಕಟ್ಟಡದ ಏಳನೇ ಮಹಡಿಯ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು 17 ವರ್ಷದ ಬಾಲಕಿ ಮೃತಪಟ್ಟಿದ್ದು, ಆಕೆಯ ಕುಟುಂಬದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಹಿಬಾಗ್ ಪ್ರದೇಶದಲ್ಲಿರುವ 11 ಅಂತಸ್ತಿನ ಆರ್ಕಿಡ್ ಗ್ರೀನ್ ಸೊಸೈಟಿಯಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ.

ಏಳನೇ ಮಹಡಿಯಲ್ಲಿರುವ ಫ್ಲಾಟ್‌ನ ಬಾಲ್ಕನಿಯಲ್ಲಿದ್ದ ಬಾಲಕಿ ಪ್ರಾಂಜಲ್ ಜಿರಾವಾಲಾಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆವೇಳೆಗಾಗಲೇ ಆಕೆ ಮೃತಪಟ್ಟಿದ್ದಳು ಎಂದು ವಿಭಾಗೀಯ ಅಗ್ನಿಶಾಮಕ ಅಧಿಕಾರಿ ಓಂ ಜಡೇಜಾ ತಿಳಿಸಿದ್ದಾರೆ.

ಕಟ್ಟಡದ ಮೇಲಿನ ಮಹಡಿಯಿಂದ ಕನಿಷ್ಠ 40 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಮೇಲ್ನೋಟಕ್ಕೆ, ಫ್ಲಾಟ್‌ನ ಬಾತ್‌ರೂಂನಲ್ಲಿ ಗೀಸರ್ ಸ್ವಿಚ್ ಆನ್ ಆಗಿದ್ದರಿಂದ ವಿದ್ಯುತ್ ವೈರಿಂಗ್‌ ಅತಿಯಾದ ಬಿಸಿಯಾಗಿ ಬೆಂಕಿ ಕಾಣಿಸಿಕೊಂಡಿದೆ. ಕಾರಣ ಎಂದು ಜಡೇಜಾ ಹೇಳಿದರು.

ಸುರೇಶ ಜಿರಾವಾಲಾ ಎಂಬಾತ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುವ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವರ ಜೊತೆಯಲ್ಲಿ ಅವರ ಸೊಸೆಯೂ ಇದ್ದರು. ಬೆಳಿಗ್ಗೆ, ಬಾಲಕಿ ಸ್ನಾನ ಮಾಡಲು ಹೋಗಿದ್ದಾಳೆ ಮತ್ತು ಬೆಡ್ ರೂಂಗೆ ಬೀಗ ಹಾಕಲಾಗಿತ್ತು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೊಠಡಿಯನ್ನು ವ್ಯಾಪಿಸಿದೆ ಎಂದರು.

ಬೆಂಕಿಯು ಆವರಿಸುತ್ತಿದ್ದಂತೆ, ಜಿರಾವಾಲಾ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹೊರಗೆ ಧಾವಿಸಿದರು. ಆದರೆ, ಪ್ರಾಂಜಲ್ ಸಿಲುಕಿಕೊಂಡರು. ಕಬ್ಬಿಣದ ಗ್ರಿಲ್‌ನಿಂದ ಮುಚ್ಚಿದ ಬಾಲ್ಕನಿಯಿಂದ ಸಹಾಯಕ್ಕಾಗಿ ಕೂಗಿದಳು. ಈ ವೇಳೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದ ತಂಡವು ಏಣಿ ಮತ್ತು ಇತರ ಸಲಕರಣೆಗಳನ್ನು ಬಳಸಿ ಎಂಟನೇ ಮಹಡಿಯ ಫ್ಲಾಟ್‌ಗೆ ಪ್ರವೇಶಿಸಿ ಗ್ರಿಲ್ ಅನ್ನು ಕತ್ತರಿಸಿತು ಎಂದು ಜಡೇಜಾ ಹೇಳಿದರು.

ಬಾಲಕಿ ಪ್ರಜ್ಞಾಹೀನಳಾಗಿದ್ದರೂ ರಕ್ಷಿಸಿದಾಗ ಸ್ಪಂದಿಸುತ್ತಿದ್ದಳು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆಕೆ ಸುಟ್ಟ ಗಾಯಗಳಿಂದ ಬಳಲುತ್ತಿದ್ದಳು ಮತ್ತು ಆಘಾತಕ್ಕೊಳಗಾಗಿದ್ದರಿಂದ ಬದುಕುಳಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

15 ಅಗ್ನಿಶಾಮಕ ವಾಹನಗಳನ್ನು ಬಳಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ 35-40 ನಿಮಿಷಗಳ ಕಾಲ ನಡೆಯಿತು. ಸದ್ಯ ಬೆಂಕಿ ನಿಯಂತ್ರಣದಲ್ಲಿದೆ ಎಂದು ಜಡೇಜಾ ಹೇಳಿದರು.

SCROLL FOR NEXT