ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿಯ ಪ್ರಕಾರ, 2022ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯು ದೇಶದಲ್ಲಿಯೇ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ. ದೆಹಲಿಯಲ್ಲಿ ಕಳೆದ ವರ್ಷ ಪಿಎಂ 2.5(ಗಾಳಿಯ ದೂಳಿನ ಪ್ರಮಾಣ) ಇದ್ದು, ಇದು ಸುರಕ್ಷಿತ ಮಿತಿಗಿಂತ ಎರಡು ಪಟ್ಟು ಹೆಚ್ಚು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪ್ರಮಾಣವು ಪಿಎಂ2.5 ಇದ್ದು, ಇದು ನಾಲ್ಕು ವರ್ಷಗಳಲ್ಲಿ ಶೇ. 7 ರಷ್ಟು ಕಡಿಮೆಯಾಗಿದೆ. 2019 ರಲ್ಲಿ ಘನ ಮೀಟರ್‌ಗೆ 108 ಮೈಕ್ರೋಗ್ರಾಂ ಇತ್ತು. ಅದು 2022 ರಲ್ಲಿ 99.71 ಮೈಕ್ರೊಗ್ರಾಂ ಇಳಿದಿದೆ ಎಂದು NCAP ಟ್ರ್ಯಾಕರ್ ವರದಿ ಹೇಳಿದೆ.
ಕೇಂದ್ರ ಸರ್ಕಾರ ಜನವರಿ 10, 2019 ರಂದು 102 ನಗರಗಳಲ್ಲಿ ಪಿಎಂ2.5 ಮತ್ತು ಪಿಎಂ 10 ಪ್ರಮಾಣವನ್ನು 2024 ರ ವೇಳೆಗೆ ಶೇಕಡಾ 20 ರಿಂದ 30 ರಷ್ಟು ಕಡಿಮೆ ಮಾಡಲು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಪಿಎಂ 2.5 ಮಟ್ಟಕ್ಕೆ ಸಂಬಂಧಿಸಿದಂತೆ ಅತ್ಯಂತ ಕಲುಷಿತ ನಗರಗಳ ಪೈಕಿ ದೆಹಲಿ(ಪ್ರತಿ ಘನ ಮೀಟರ್‌ಗೆ 99.71 ಮೈಕ್ರೋಗ್ರಾಂ) ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣದ ಫರಿದಾಬಾದ್(ಘನ ಮೀಟರ್‌ಗೆ 95.64 ಮೈಕ್ರೋಗ್ರಾಂ) ಎರಡನೇ ಸ್ಥಾನ ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್ (ಘನ ಮೀಟರ್‌ಗೆ 91.25 ಮೈಕ್ರೋಗ್ರಾಂ) ಮೂರನೇ ಸ್ಥಾನದಲ್ಲಿದೆ.