ದೇಶ

ಅಸ್ಸಾಂನಲ್ಲಿ 40 ಕೋಟಿ ರೂ. ಮೌಲ್ಯದ ನಿಷೇಧಿತ ಯಾಬಾ ಮಾತ್ರೆ ವಶ, ಒಬ್ಬನ ಬಂಧನ

Lingaraj Badiger

ಗುವಾಹಟಿ: ಕಳ್ಳಸಾಗಾಣಿಕೆದಾರನೊಬ್ಬ ನೀಡಿದ 20 ಲಕ್ಷ ರೂಪಾಯಿ ಲಂಚದ ಆಫರ್ ತಿರಸ್ಕರಿಸಿ ಕರ್ತವ್ಯ ನಿಷ್ಠೆ ಮೆರೆದೆ ಅಸ್ಸಾಂ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ 7.59 ಲಕ್ಷ ನಿಷೇಧಿತ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದು ರಾಜ್ಯದಲ್ಲಿ ಯಾಬಾ ಮಾತ್ರೆಗಳ ಅತಿ ದೊಡ್ಡ ಜಪ್ತಿಯಾಗಿದೆ ಎಂದು ಹೇಳಲಾಗುತ್ತಿದ್ದು, ಮಂಗಳವಾರ ಬೆಳ್ಳಂಬೆಳಗ್ಗೆ ಬರಾಕ್ ಕಣಿವೆಯ ಕರೀಂಗಂಜ್ ಜಿಲ್ಲೆಯಲ್ಲಿ 40 ಕೋಟಿ ರೂ. ಮೌಲ್ಯದ ನಿಷೇಧಿತ ಯಾಬಾ ಮಾತ್ರೆ ವಶಪಡಿಸಿಕೊಳ್ಳಲಾಗಿದೆ. 

ಕಾರಿನಲ್ಲಿ ಮಾತ್ರೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಕರೀಂಗಂಜ್ ಜಿಲ್ಲೆಯ ಬಾದರ್‌ಪುರದ ಸೋಂಬರಿಬಜಾರ್ ನಿವಾಸಿ ಹಫೀಜ್ ಉದ್ದೀನ್ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗೃಹರಕ್ಷಕರಾದ ಅನುಪಮ್ ಮಾಲಕರ್ ಮತ್ತು ಜಾಶಿಮ್ ಉದ್ದೀನ್ ಅವರು ಈ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ಪತ್ರಕರ್ತರಿಗೆ ತಿಳಿಸಿದ್ದಾರೆ.

“ಒಟ್ಟು 7,59,200 ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ಕಾರ್ಯಾಚರಣೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಯಾಬಾ ಮಾತ್ರೆಗಳನ್ನು ಇದುವರೆಗೂ ವಶಪಡಿಸಿಕೊಂಡಿರಲಿಲ್ಲ” ಎಂದು ದಾಸ್ ಹೇಳಿದ್ದಾರೆ.

ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಅವರಿಗೆ ಸಹಾಯ ಮಾಡಿದ ವಿಲೇಜ್ ಡಿಫೆನ್ಸ್ ಪಾರ್ಟಿ(ವಿಡಿಪಿ) ಸದಸ್ಯರಾದ ಅಮಿಯೋ ಪೌಲ್ ಮತ್ತು ದೀಪಂಕರ್ ಪಾಲ್ ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಕರೀಂಗಂಜ್ ಪೊಲೀಸರು ತಿಳಿಸಿದ್ದಾರೆ.

SCROLL FOR NEXT