ದೇಶ

ಕುಸಿಯುತ್ತಿರುವ ಜೋಶಿಮಠದಲ್ಲಿ ಬದ್ರಿನಾಥ ದೇವಾಲಯದ ಸಂಪತ್ತು ಸಂರಕ್ಷಣೆಯದ್ದೇ ಅಧಿಕಾರಿಗಳಿಗೆ ಚಿಂತೆ!

Srinivas Rao BV

ಡೆಹ್ರಾಡೂನ್:  ಕುಸಿಯುತ್ತಿರುವ ಜೋಶಿಮಠದಲ್ಲಿ ನರಸಿಂಹ ದೇವಾಲಯದಲ್ಲಿರುವ ಭಗವಾನ್ ಬದ್ರಿನಾಥನ ಸಂಪತ್ತು ಸಂರಕ್ಷಣೆ ವಿಷಯ ಈಗ ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಅಧಿಕಾರಿಗಳ ಪ್ರಕಾರ ದೇವಾಲಯ ಸದ್ಯಕ್ಕೇನೋ ಸುರಕ್ಷಿತವಾಗಿದೆ. ಆದರೆ ಒಂದು ವೇಳೆ ಪರಿಸ್ಥಿತಿ ಹದಗೆಟ್ಟರೆ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿ ಮುಂತಾದ ಸಂಪತ್ತನ್ನು ಹೊಂದಿರುವ ಸಂಪತ್ತನ್ನು ರಕ್ಷಿಸಿ ಇಡಲು ಪರ್ಯಾಯ ಸ್ಥಳಕ್ಕಾಗಿ ಹುಡುಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರವಾಗಿ ಹಾನಿಗೀಡಾಗಿರುವ ಸಿಂಗ್ ಧರ್ ವಾರ್ಡ್ ಹಾಗೂ ಜೆಪಿ ಕಾಲೋನಿಗಳು ನರಸಿಂಹ ದೇವಾಲಯದಿಂದ ವೈಮಾನಿಕ ಅಳತೆಯಲ್ಲಿ ಅರ್ಧ ಕಿ.ಮೀ ದೂರದಲ್ಲಷ್ಟೇ ಇರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿರುವ ಅಂಶಗಳಾಗಿವೆ.

ಜೋಶಿಮಠದಲ್ಲಿನ ನರಸಿಂಹ ದೇವಾಲಯದಲ್ಲಿ ವಿಷ್ಣು ಬದ್ರಿನಾಥದ ಪ್ರಮುಖ ದೇವರಾಗಿದ್ದು, ಚಳಿಗಾಲದಲ್ಲಿ ಆಭರಣಗಳನ್ನು ಪರ್ವತಗಳ ಕೆಳಗಿನ ನರಸಿಂಹ ದೇವಾಲಯಕ್ಕೆ ತರಲಾಗುತ್ತದೆ. ನರಸಿಂಹ ದೇವಾಲಯ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿರುಕು ಕಂಡುಬಂದಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಸಂಪತ್ತನ್ನು ವರ್ಗಾಯಿಸಲು ಬೇರೆ ಪರ್ಯಾಯ ವ್ಯವಸ್ಥೆಗಳನ್ನು ಹುಡುಕುತ್ತಿದ್ದೇವೆ ಎಂದು ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ತಿಳಿಸಿದ್ದಾರೆ.

ಕೆಲವು ಸ್ಥಳಗಳನ್ನು ಗುರುತಿಸಲಾಗಿದ್ದು, ಪಿಪಲ್ಕೊಟಿಯಲ್ಲಿರುವ ಅತಿಥಿ ಗೃಹ ಅತ್ಯಂತ ಸೂಕ್ತವಾಗಿದೆ ಎಂಬ ಅಭಿಪ್ರಾಯವಿದೆ ಎಂದು ಅಜಯ್ ತಿಳಿಸಿದ್ದಾರೆ. ಕೆಲವು ಮಂದಿ ಪಾಂಡುಕೇಶ್ವರ್ ನಲ್ಲಿನ ಸ್ಥಳವನ್ನು ಸೂಚಿಸಿದ್ದಾರೆ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ, ಅಂತಹ ಪರಿಸ್ಥಿತಿ ಬರುವುದೂ ಬೇಡ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅಜಯ್ ತಿಳಿಸಿದ್ದಾರೆ.

SCROLL FOR NEXT