ದೇಶ

ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದಿದ್ದಕ್ಕೆ ತೇಜಸ್ವಿ ಸೂರ್ಯ ಕ್ಷಮೆಯಾಚಿಸಿದ್ದಾರೆ: ನಾಗರಿಕ ವಿಮಾನಯಾನ ಸಚಿವ

Lingaraj Badiger

ನವದೆಹಲಿ: ಕಳೆದ ತಿಂಗಳು ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಆಕಸ್ಮಿಕವಾಗಿ ತೆರೆದ ಘಟನೆಯ ಬಗ್ಗೆ ಸ್ವತಃ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ವರದಿ ಮಾಡಿ ಕ್ಷಮೆಯಾಚಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬುಧವಾರ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಪ್ರಯಾಣಿಕರೊಬ್ಬರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಿದ ನಂತರ ಆಕಸ್ಮಿಕವಾಗಿ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದರು ಎಂದು ಇಂಡಿಗೋ ಮಂಗಳವಾರ ಹೇಳಿತ್ತು. ಆದರೆ ಆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿರಲಿಲ್ಲ.

ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ಸಚಿವ ಸಿಂಧಿಯಾ ಅವರು, ಇದು ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್ ಆಗುವ ಮುನ್ನ ನಡೆದಿದೆ ಎಂದು ಹೇಳಿದ್ದಾರೆ.

"ಘಟನೆ ಸಂಭವಿಸಿದ ನಂತರ ತೇಜಸ್ವಿ ಸೂರ್ಯ ಅವರೇ ಆ ಬಗ್ಗೆ ವರದಿ ಮಾಡಿದ್ದಾರೆ. ಅದರ ಆಧಾರದ ಮೇಲೆ ಸಂಪೂರ್ಣ ಪ್ರೋಟೋಕಾಲ್ ಅನ್ನು ಅನುಸರಿಸಲಾಗಿದೆ. ಡಿಜಿಸಿಎ ಸ್ವತಃ ತನಿಖೆ ಮಾಡಿದ ನಂತರ ವಿಮಾನ ಟೇಕ್ ಆಫ್ ಆಗಿದೆ. ಈ ಬಗ್ಗೆ ಸಂಸದರೇ ಕ್ಷಮೆಯಾಚಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ತೇಜಸ್ವಿ ಸೂರ್ಯ ಸ್ವತಃ ಸಿಬ್ಬಂದಿ ಮತ್ತು ಪೈಲಟ್‌ಗೆ ವರದಿ ಮಾಡಿದ ನಂತರ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಯಿತು ಮತ್ತು ನಂತರವೇ ವಿಮಾನವನ್ನು ಟೇಕ್ ಆಫ್ ಮಾಡಲು ಅನುಮತಿಸಲಾಯಿತು” ಎಂದು ಸಚಿವರು ಹೇಳಿದ್ದಾರೆ.

ಇಂಡಿಗೋ ವಿಮಾನ ಹಾರಲು ಸಿದ್ಧತೆ ನಡೆಸುತ್ತಿದ್ದಾಗ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಪ್ರಯಾಣಿಕನೊಬ್ಬ ತನ್ನ ವಿಮಾನ 6E 7339 (ಚೆನ್ನೈ ನಿಂದ ತಿರುಚಿರಾಪಳ್ಳಿಗೆ ಹೋಗುತ್ತಿದ್ದ ವಿಮಾನ)ನ ತುರ್ತು ನಿರ್ಗಮನ ದ್ವಾರವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತೆರೆದಿದ್ದು, ಆನಂತರ ಆ ಪ್ರಯಾಣಿಕ ಕ್ಷಮೆಯಾಚಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ  ಡಿಸೆಂಬರ್ 10 ರಂದು ತಿಳಿಸಿದೆ. ಹೀಗೆ ತುರ್ತು ನಿರ್ಗಮನ ದ್ವಾರ ತೆರೆದ ಪ್ರಯಾಣಿಕ ತೇಜಸ್ವಿ ಸೂರ್ಯ ಎಂದು ಘಟನೆ ನಡೆದು ಒಂದು ತಿಂಗಳ ನಂತರ ವಿಮಾನಯಾನ ಸಚಿವರು ಖಚಿತಪಡಿಸಿದ್ದಾರೆ.

SCROLL FOR NEXT