ದೇಶ

ರಾಹುಲ್ ಗಾಂಧಿಯನ್ನು ಆದಿ ಶಂಕರಾಚಾರ್ಯರಿಗೆ ಹೋಲಿಸಿದ ಫಾರೂಖ್ ಅಬ್ದುಲ್ಲಾ!

Nagaraja AB

ಲಖನ್‌ಪುರ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸುತ್ತಿದ್ದಂತೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ಅವರು ರಾಹುಲ್ ಗಾಂಧಿಯನ್ನು ವೇದ ವಿದ್ವಾಂಸ ಆದಿ ಶಂಕರಾಚಾರ್ಯರಿಗೆ ಹೋಲಿಸಿದ್ದಾರೆ.

ಜಮ್ಮು- ಕಾಶ್ಮೀರದ ಲಖನ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಶಂಕರಾಚಾರ್ಯರ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಕೈಗೊಂಡ ಮೊದಲ ವ್ಯಕ್ತಿ ರಾಹುಲ್ ಗಾಂಧಿ ಎಂದು ಹೇಳಿದರು.

ಶತಮಾನಗಳ ಹಿಂದೆ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದರು. ರಸ್ತೆಗಳಿಲ್ಲದಿದ್ದರೂ ದಟ್ಟ ಕಾಡಿನಲ್ಲಿಯೇ ಅವರು ನಡೆದು ಬಂದಿದ್ದರು. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದರು. ಅದೇ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಯಾತ್ರೆ ಕೈಗೊಂಡು ಕಾಶ್ಮೀರ ತಲುಪುತ್ತಿರುವ ಎರಡನೇ ವ್ಯಕ್ತಿ ರಾಹುಲ್ ಗಾಂಧಿಯಾಗಿದ್ದು,  ಭಾರತವನ್ನು ಒಗ್ಗೂಡಿಸುವುದು ಈ ಯಾತ್ರೆಯ ಗುರಿಯಾಗಿದೆ ಎಂದು ಹೇಳಿದರು.

ದೇಶದಲ್ಲಿ ದ್ವೇಷವನ್ನು ಸೃಷ್ಟಿಸಲಾಗುತ್ತಿದೆ ಮತ್ತು ಧರ್ಮಗಳನ್ನು ಪರಸ್ಪರ ಎತ್ತಿಕಟ್ಟಲಾಗುತ್ತಿದೆ. ಗಾಂಧಿ ಮತ್ತು ರಾಮರ ಭಾರತ ಒಂದಾಗಿತ್ತು. ಈ ಯಾತ್ರೆಯು ಭಾರತವನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದ್ದು, ಇದರ ವಿರೋಧಿಗಳು ದೇಶ, ಮಾನವೀಯತೆ ಮತ್ತು ಜನರ ವಿರೋಧಿಗಳಾಗಿದ್ದಾರೆ ಎಂದರು. 

ಆದಿ ಶಂಕರಾಚಾರ್ಯರು ಎಂಟನೇ ಶತಮಾನದ ಸಂತ ಮತ್ತು ದಾರ್ಶನಿಕರಾಗಿದ್ದರು, ಅವರು ಅದ್ವೈತ ಸಿದ್ಧಾಂತ ಪ್ರತಿಪಾದಕರು. ದೇಶಾದ್ಯಂತ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮವನ್ನು ಏಕೀಕರಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು. ಈ ಹಿಂದೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ್ದರು.

SCROLL FOR NEXT