ದೇಶ

ಒಡಿಶಾ ಸಚಿವ ನಬ ದಾಸ್ ಮೇಲೆ 'ಪೊಲೀಸ್ ಸಿಬ್ಬಂದಿಯಿಂದಲೇ ಗುಂಡಿನ ದಾಳಿ', ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

Srinivasamurthy VN

ಭುವನೇಶ್ವರ: ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬ ಕಿಶೋರ್ ದಾಸ್ (Odisha Minister Nab Kishore Das) ಮೇಲೆ ಪೊಲೀಸ್ ಸಿಬ್ಬಂದಿಯಿಂದಲೇ ಗುಂಡಿನ ದಾಳಿಯಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ವರದಿಯಾಗಿದೆ. 

ಒಡಿಶಾದ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್​ನ ಗಾಂಧಿ ಚಕ ಎಂಬಲ್ಲಿ ಭಾನುವಾರ ಮಧ್ಯಾಹ್ನ 12:30ಕ್ಕೆ ಈ ಘಟನೆ ಸಂಭವಿಸಿದೆ. ಪೊಲೀಸ್ ಅಧಿಕಾರಿ ಎಎಸ್​ಐ ಗೋಪಾಲ್ ಚಂದ್ರ ದಾಸ್ ಅವರು ಸಚಿವರ ಎದೆಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. 

ಬಿಜು ಪಾಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದಲ್ಲಿ ಪ್ರಬಲ ಸಚಿವರಲ್ಲೊಬ್ಬರಾಗಿರುವ ನಬ ದಾಸ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾರಿನಿಂದ ಕೆಳಗಿಳಿಯುವಾಗ ಈ ದಾಳಿ ನಡೆದಿದೆ. ನಬ ದಾಸ್ ಅವರ ಎದೆಗೆ ಎರಡು ಗುಂಡುಗಳು ಹೊಕ್ಕಿವೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಝಾರಸುಗುಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೂರ್ವಯೋಜಿತ ಕೃತ್ಯ
ನವ್ ಕಿಶೋರ್ ದಾಸ್ ಮೇಲೆ ನಡೆದ ದಾಳಿಯು ಪೂರ್ವಯೋಜಿತ ಕೃತ್ಯ ಎಂದು ಶಂಕಿಸಲಾಗಿದೆ. ಆದರೆ, ಯಾವ ಕಾರಣಕ್ಕಾಗಿ ಇವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂಬುದು ತಿಳಿದುಬಂದಿಲ್ಲ. ನಬ್ ದಾಸ್ ಮೇಲೆ ಆರೋಪಿಯು ನಾಲ್ಕೈದು ಸುತ್ತು ಗುಂಡಿನ ದಾಳಿ ಮಾಡಿದ್ದಾನೆ. ಎರಡು ಗುಂಡಗಳು ಎದೆಗೆ ಹೊಕ್ಕಿವೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಆರೋಪಿಯಾಗಿರುವ ಎಎಸ್​ಐ ಗೋಪಾಲ್ ಚಂದ್ರ ದಾಸ್​ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

ನಬ ಕಿಶೋರ್ ದಾಸ್ ಅವರು ಇತ್ತೀಚೆಗೆ ಮಹಾರಾಷ್ಟ್ರದ ಶನಿ ಶಿಂಗನಾಪುರ ದೇವಸ್ಥಾನಕ್ಕೆ ಒಂದು ಕೋಟಿ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಸುದ್ದಿಯಲ್ಲಿದ್ದರು.
 

SCROLL FOR NEXT