ದೇಶ

6 ದಿನ ಮೊದಲೇ ಇಡೀ ದೇಶಕ್ಕೇ ಆವರಿಸಿದ ಮುಂಗಾರು, 5 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Srinivasamurthy VN

ನವದೆಹಲಿ: ನಿಗದಿತ ಅವಧಿಗೂ ಅಂದರೆ 6 ದಿನ ಮೊದಲೇ ನೈರುತ್ಯ ಮುಂಗಾರು ಇಡೀ ದೇಶವನ್ನು ಆವರಿಸಿದ್ದು, ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಹಜವಾಗಿ ಜುಲೈ 8ರ ವೇಳೆಗೆ ಮುಂಗಾರು ಇಡೀ ದೇಶವನ್ನು ವ್ಯಾಪಿಸಬೇಕಿತ್ತು. ಆರು ದಿನಗಳಿಗೂ ಮುಂಚಿತವಾಗಿಯೇ ಭಾನುವಾರದಂದು ಇಡೀ ದೇಶವನ್ನು ಆವರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರಾಜಸ್ತಾನ, ಪಂಜಾಬ್‌ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಉತ್ತರ ಪ್ರದೇಶದ ಪೂರ್ವ ಮತ್ತು ಬಿಹಾರದ ದಕ್ಷಿಣ ಭಾಗವನ್ನು ಹೊರತುಪಡಿಸಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ IMD ವಿಜ್ಞಾನಿ ಡಾ. ನರೇಶ್ ಕುಮಾರ್ ಅವರು, 'ನೈಋತ್ಯ ಮಾನ್ಸೂನ್ ಇಂದು ಇಡೀ ದೇಶವನ್ನು ಆವರಿಸಿದ್ದು, ಸಾಮಾನ್ಯವಾಗಿ ಜುಲೈ 8ರಂದು ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಸರಾಸರಿ ದಿನಾಂಕಕ್ಕಿಂತ ಮೊದಲೇ ದೇಶಾದ್ಯಂತ ಮುಂಗಾರು ಆವರಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಮಾನ್ಸೂನ್ ವಿಶೇಷವಾಗಿ ಸಕ್ರಿಯವಾಗಿದ್ದು, ಮುಂದಿನ ಐದು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಅವರು ಹೇಳಿದರು.

ಗುಜರಾತ್ ನಲ್ಲಿ ಪ್ರವಾಹ
ಏತನ್ಮಧ್ಯೆ, ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಭಾನುವಾರ ಚರ್ಚೆ ನಡೆಸಿದ್ದು, ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಜನರೊಂದಿಗೆ ನಿಂತಿವೆ ಎಂದು ಶಾ ಭರವಸೆ ನೀಡಿದರು. ಭಾರೀ ಮಳೆಯಿಂದ ಗುಜರಾತ್‌ನ ಹಲವು ಭಾಗಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಏತನ್ಮಧ್ಯೆ, ವಾಯುವ್ಯ ಉತ್ತರ ಪ್ರದೇಶ ಮತ್ತು ಅದರ ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆ ಇದೆ. ಮತ್ತೊಂದು ಚಂಡಮಾರುತದ ಪರಿಚಲನೆಯು ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಪಕ್ಕದಲ್ಲಿದೆ. ಉತ್ತರಾಖಂಡ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳು ಮತ್ತು ಗುಜರಾತ್‌ನಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣದಲ್ಲಿ ಮಳೆ ಕೊರತೆ
ಜೂನ್‌ನಲ್ಲಿ 16 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ಮಳೆ ಕೊರತೆ ಎದುರಿಸಿದ್ದವು. ಈ ತಿಂಗಳಿನಲ್ಲಿ ಸರಾಸರಿಗಿಂತಲೂ ಕಡಿಮೆ ಮಳೆ ಸುರಿದಿದ್ದರಿಂದ ಬಿತ್ತನೆಗೆ ಹಿನ್ನಡೆಯಾಗಿತ್ತು. ಅದರಲ್ಲೂ ಬಿಹಾರ ಶೇ.69 ಮತ್ತು ಕೇರಳದಲ್ಲಿ ಶೇ 60ರಷ್ಟು ಮಳೆ ಕೊರತೆಯಾಗಿತ್ತು. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್‌, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಮಳೆ ಕೊರತೆಯುಂಟಾಗಿದ್ದು, ಅನ್ನದಾತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

SCROLL FOR NEXT