ದೇಶ

ಕಾಶ್ಮೀರ: ಬಾರಾಮುಲ್ಲಾದಲ್ಲಿ ಲಷ್ಕರ್ ಉಗ್ರನ ಬಂಧನ

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ(ಎಲ್ ಇಟಿ) ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಉತ್ತರ ಕಾಶ್ಮೀರ ಜಿಲ್ಲೆಯ ಕ್ರೀರಿ ಪ್ರದೇಶದ ನೌಪೋರಾ ಜಾಗೀರ್ ಗ್ರಾಮದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿ, ಉಗ್ರನನ್ನು ಬಂಧಿಸಿವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಶೋಧದ ವೇಳೆ, ಭದ್ರತಾ ಪಡೆಗಳನ್ನು ಗಮನಿಸಿದ ಶಂಕಿತ ಉಗ್ರ ಓಡಿಹೋಗಲು ಪ್ರಯತ್ನಿಸಿದನು. ಆದರೆ ಉಗ್ರ ಸಂಘಟನೆಯ ಸಹಚರರನ್ನು ಬಂಧಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಅವರು ಹೇಳಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮೊಹಮ್ಮದ್ ಸೀದಿಕ್ ಲೋನ್ ಎಂದು ಗುರುತಿಸಿಲಾಗಿದ್ದು, ಕ್ರೀರಿಯ ನೌಪೋರಾ ಜಾಗೀರ್ ನಿವಾಸಿಯಾಗಿದ್ದಾನೆ ಎಂದು ವಕ್ತಾರರು ತಿಳಿಸಿದ್ದಾರೆ.

ಬಂಧಿತ ಉಗ್ರನಿಂದ ಪಿಸ್ತೂಲ್, ಪಿಸ್ತೂಲ್ ಮ್ಯಾಗಜೀನ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಲೋನ್, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಭಯೋತ್ಪಾದಕ ಸಹಚರನಾಗಿ ಕೆಲಸ ಮಾಡುತ್ತಿರುವುದು ಮತ್ತು ಸಕ್ರಿಯ ಭಯೋತ್ಪಾದಕರಾದ ಸೋಪೋರ್‌ನ ಆದಿಲ್ ದಾಂಟೂ ಮತ್ತು ಪಾಕಿಸ್ತಾನದ ವಿದೇಶಿ ಭಯೋತ್ಪಾದಕ ಉಸ್ಮಾನ್ ಭಾಯಿ ಅವರೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT