ಜೈಪುರ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಸಣ್ಣ ಪಟ್ಟಣದಲ್ಲಿನ ಅಸಾಮಾನ್ಯ ಎನಿಸುವಂತ ಪ್ರೇಮಕಥೆಯೊಂದು ತೀವ್ರ ಉದ್ವಿಗ್ನತೆಯನ್ನು ಉಂಟುಮಾಡಿದೆ. ಜುಲೈ 1 ರಂದು 17 ವರ್ಷದ ಹಿಂದೂ ಹುಡುಗಿ ತನ್ನ ಮುಸ್ಲಿಂ ಶಿಕ್ಷಕಿಯೊಂದಿಗೆ ನಾಪತ್ತೆಯಾಗಿದ್ದಾಳೆ. ಘಟನೆಯನ್ನು ಲವ್ ಜಿಹಾದ್ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಇಬ್ಬರೂ ಸೋಮವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ತಾವು ಲೆಸ್ಬಿಯನ್ ಸಂಬಂಧದಲ್ಲಿರುವುದಾಗಿ ಮತ್ತು ಒಟ್ಟಿಗೆ ಇರಲು ಸ್ವಇಚ್ಛೆಯಿಂದ ತಮ್ಮ ಮನೆಗಳನ್ನು ತೊರೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಕೋಮು ಗಲಭೆಗಳಲ್ಲಿ ಪಾಲ್ಗೊಳ್ಳದಂತೆ ಜನರನ್ನು ಒತ್ತಾಯಿಸಿದ್ದಾರೆ ಮತ್ತು ನಮ್ಮ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಅವರ ಪೋಷಕರನ್ನು ವಿನಂತಿಸಿದ್ದಾರೆ.
ಶ್ರೀ ಡುಂಗರ್‌ಗಢ್ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯ ಹಠಾತ್ ನಾಪತ್ತೆಯು ಆ ಪ್ರದೇಶದಾದ್ಯಂತ ಆಘಾತ ಸೃಷ್ಟಿಸಿತ್ತು. ಬಾಲಕಿಯ ಸಂಬಂಧಿಕರು ಶಾಲೆಯ ಮಹಿಳಾ ಶಿಕ್ಷಕಿ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕಿಯ ಕುಟುಂಬದವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು. ಘಟನೆ ನಡೆದ ಎರಡು ದಿನಗಳ ನಂತರ ಭಾನುವಾರ ಜೈಪುರ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಆರೋಪಿ ಶಿಕ್ಷಕಿ ಮತ್ತು ಬಾಲಕಿ ಸೆರೆಯಾಗಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ಬಾಲಕಿ ಕೊನೆಯದಾಗಿ ಕಾಣಿಸಿಕೊಂಡಿದ್ದಾಳೆ. ಈ ಘಟನೆಯು 'ಲವ್ ಜಿಹಾದ್' ಎಂದು ಹಲವರು ದೂರಿದ್ದು, ಬಾಲಕಿಯ ಕುಟುಂಬ, ನೂರಾರು ಸ್ಥಳೀಯರು ಮತ್ತು ಪ್ರತಿಪಕ್ಷ ಬಿಜೆಪಿಯು ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕಾರಣವಾಯಿತು. ಈ ಪ್ರದೇಶದಲ್ಲಿ ಸದ್ಯ ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದು, ಕೋಮು ಉದ್ವಿಗ್ನತೆ ಹೆಚ್ಚಾಗಿದೆ.
ಜುಲೈ 8 ರಂದು ಬಿಕಾನೇರ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದು, ಈ ಘಟನೆ ಇದೀಗ ವ್ಯಾಪಕ ಪ್ರಾಮುಖ್ಯತೆ ಪಡೆದಿದೆ. ಇದರ ಪರಿಣಾಮವಾಗಿ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಬಿಕಾನೇರ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ.
ವಿಡಿಯೋದಲ್ಲಿ, 'ಡುಂಗರ್‌ಗಢದಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ನಮಗೆ ತಿಳಿದಿದೆ. ಅವರು (ಮಹಿಳಾ ಶಿಕ್ಷಕಿ) ಅಥವಾ ಅವರ ಕುಟುಂಬ ಸದಸ್ಯರು ನನ್ನನ್ನು ಈ ಪರಿಸ್ಥಿತಿಗೆ ಸಿಲುಕಿಸಿದ್ದಾರೆ ಎಂದು ನೀವು ನಂಬಬಹುದು. ಆದರೆ, ಅದು ನಿಜವಲ್ಲ. ನಿಜವಾಗಿಯೂ, ನಾವಿಬ್ಬರೂ ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸುತ್ತೇವೆ. ಅವರ ಮನವೊಲಿಕೆಗೆ ಬೀಳುವಷ್ಟು ಮುಗ್ಧೆ ನಾನಲ್ಲ. ನಾವು ಲೆಸ್ಬಿಯನ್ನರು ಮತ್ತು ಬೇರೆಯವರನ್ನು ಮದುವೆಯಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ನಮ್ಮ ಮನೆಗಳನ್ನು ತೊರೆಯುವ ನಿರ್ಧಾರವನ್ನು ಮಾಡಿದೆವು. ನಾವು ಬೇರೆಯಾಗುವುದನ್ನು ಸಹಿಸುವುದಿಲ್ಲ. ನೀವು ನಮ್ಮನ್ನು ಹಿಡಿದರೆ, ನಮ್ಮ ಜೀವನ ಹಾಳಾಗುತ್ತದೆ' ಎಂದು ಬಾಲಕಿ ಹೇಳಿದ್ದಾಳೆ.
ಇದೇ ವೇಳೆ 22 ವರ್ಷದ ಶಿಕ್ಷಕಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತಾ, 'ನಾನು ಆಕೆಯನ್ನು ಈ ಪರಿಸ್ಥಿತಿಗೆ ಸಿಲುಕಿಸಿಲ್ಲ. ನಾವು ನಮ್ಮ ಸ್ವಂತ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ. ದಯವಿಟ್ಟು ಅನಗತ್ಯ ಗಲಭೆಗಳನ್ನು ಪ್ರಚೋದಿಸುವುದನ್ನು ತಪ್ಪಿಸಿ. ನಾನು ಯಾವುದೇ ತಪ್ಪು ಮಾಡಿಲ್ಲದಿದ್ದರೂ, ನೀವು ನನ್ನ ಕುಟುಂಬವನ್ನು ಏಕೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದೀರಿ? ನಾವು ಸುರಕ್ಷಿತವಾಗಿರುತ್ತೇವೆ ಮತ್ತು ಜಾಗರೂಕರಾಗಿದ್ದೇವೆ. ನಾವು ಭವಿಷ್ಯದಲ್ಲಿ ಸಂತೋಷವಾಗಿರುತ್ತೇವೆ. ಆದ್ದರಿಂದ ದಯವಿಟ್ಟು ನಮಗೆ ಅವಕಾಶ ಮಾಡಿಕೊಡಿ' ಎಂದಿದ್ದಾರೆ.
ಆದರೂ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಬಾಲಕಿ 17 ವರ್ಷದ ಅಪ್ರಾಪ್ತೆಯಾಗಿರುವುದರಿಂದ, ರಾಜಸ್ಥಾನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡಿದೆ.
ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್, 'ನಾವು ವಿವಿಧ ಸುದ್ದಿ ಮೂಲಗಳ ಮೂಲಕ ಮಾಹಿತಿ ಪಡೆದಿದ್ದೇವೆ. ಇದರ ನಂತರ, ನಾವು ಬಿಕಾನೇರ್ ಪೊಲೀಸ್ ವರಿಷ್ಠಾಧಿಕಾರಿಯಿಂದ ಘಟನೆಯ ವಿವರಗಳನ್ನು ಸಂಗ್ರಹಿಸಿದ್ದೇವೆ. ತನಿಖೆಯನ್ನು ತ್ವರಿತಗೊಳಿಸಲು ಮತ್ತು ಸತ್ಯವನ್ನೊಳಗೊಂಡ ವರದಿಯನ್ನು ಆಯೋಗದ ಕಚೇರಿಗೆ ಒದಗಿಸಲು ಸೂಚನೆಗಳನ್ನು ನೀಡಲಾಗಿದೆ' ಎಂದಿದ್ದಾರೆ.