ದೇಶ

ಮಧ್ಯ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ; ಕೆಳಜಾತಿಯ ಯುವಕರಿಗೆ ಮಲ ತಿನ್ನುವಂತೆ ಒತ್ತಾಯ!

Ramyashree GN

ಬೋಫಾಲ್: ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಕೆಳಜಾತಿಗೆ ಸೇರಿದ ಇಬ್ಬರು ಯುವಕರ ಮೇಲೆ ದೌರ್ಜನ್ಯ ಎಸಗಿರುವ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಯುವಕರನ್ನು ಅವಮಾನಿಸಲಾಗಿದೆ, ಶೂಗಳ ಹಾರದೊಂದಿಗೆ ಮೆರವಣಿ ಮಾಡಲಾಗಿದೆ ಮತ್ತು ಮಲವನ್ನು ತಿನ್ನುವಂತೆ ಒತ್ತಾಯಿಸಲಾಗಿದೆ.

ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ನಂತರ, ಅನುಜ್ ಜಾತವ್ ಮತ್ತು ಸಂತೋಷ್ ಕೇವತ್ ಎಂಬ ಯುವಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಸಂತ್ರಸ್ತರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡುವ ಬದಲು ತಾವೇ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ.

ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಎರಡು ದಿನಗಳ ನಂತರ ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಪ್ರಕಾರ, ಅಮಾನವೀಯ ಕೃತ್ಯ ಎಸಗಿದ ಆರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ (ಎನ್‌ಎಸ್‌ಎ) ಸೇರಿದಂತೆ ತಕ್ಕ ಶಿಕ್ಷೆಗೆ ಸೂಚನೆಗಳನ್ನು ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದಿದ್ದಾರೆ.

'ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ವರ್ಖಾಡಿ ಗ್ರಾಮದ ಕೆಲವರು ಅನುಜ್ ಜಾತವ್ ಮತ್ತು ಸಂತೋಷ್ ಕೇವತ್ ಎಂಬ ಇಬ್ಬರು ವ್ಯಕ್ತಿಗಳನ್ನು ಹಿಡಿದಿದ್ದಾರೆ. ಶಿಕ್ಷೆಯ ಭಾಗವಾಗಿ, ಮಂಗಳವಾರ ಇಬ್ಬರನ್ನು ಥಳಿಸಿ, ಚಪ್ಪಲಿ ಹಾರ ಹಾಕಿದ್ದಾರೆ. ಏಳು ಆರೋಪಿಗಳಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ' ಎಂದು ಸಚಿವರು ಹೇಳಿದರು.

ಸದ್ಯ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ರಾಜ್ಯದಲ್ಲಿ ಅಪರಾಧಕ್ಕೆ ಕಾನೂನಿನ ಮುಂದೆ ಬೆಲೆ ತೆರಬೇಕಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಸಚಿವರ ಸೂಚನೆ ಮೇರೆಗೆ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಆರೋಪಿಗಳಿಗೆ ಸೇರಿದ ಕೆಲ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿದೆ.

ಪೊಲೀಸರು ಏಳು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇಬ್ಬರು ಯುವಕರ ದೂರಿನ ಮೇರೆಗೆ ವರ್ಖಾಡಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಘುವಂಶ ಸಿಂಗ್ ಭಡೋರಿಯಾ ತಿಳಿಸಿದ್ದಾರೆ.

SCROLL FOR NEXT