ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ಜಂಟಿ ಕಾರ್ಯತಂತ್ರ ರೂಪಿಸಲು ಬೆಂಗಳೂರಿನಲ್ಲಿ ನಾಳೆಯಿಂದ ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಾಲ್ಗೊಳ್ಳಲಿದೆ ಎಂದು ಪಕ್ಷದ ನಾಯಕ ರಾಘವ್ ಚಡ್ಡಾ ಭಾನುವಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ ವಿಪಕ್ಷಗಳ ಸಭೆ: ಭರ್ಜರಿ ತಯಾರಿ, ಎಲ್ಲೆಡೆ ರಾರಾಜಿಸುತ್ತಿರುವ ಫೋಸ್ಟರ್ ಗಳು!
ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಇಂದು ನಡೆದ ಎಎಪಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ರಾಘವ್ ಚಡ್ಡಾ, ದೆಹಲಿಯಲ್ಲಿ ಆಡಳಿತ ನಿಯಂತ್ರಣ ಸೇವೆಗಳ ಕುರಿತು ಕೇಂದ್ರದ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ವಿರೋಧಿಸುವ ಕಾಂಗ್ರೆಸ್ ನಿರ್ಧಾರವನ್ನು ಸ್ವಾಗತಿಸಿದರು. ಸೋಮವಾರ ಬೆಂಗಳೂರಿನಲ್ಲಿ ಔತಣಕೂಟದಿಂದ ಪ್ರಾರಂಭವಾಗುವ ವಿಪಕ್ಷಗಳ ಸಭೆಯಲ್ಲಿ ಎಎಪಿ ಭಾಗವಹಿಸಲಿದೆ ಎಂದು ತಿಳಿಸಿದರು.
ದೆಹಲಿ ಆಡಳಿತ ಸೇವೆ ಕುರಿತ ಕೇಂದ್ರದ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ವಿರೋಧಿಸಿದರೆ ಮಾತ್ರ ಬೆಂಗಳೂರಿನಲ್ಲಿ ಸಭೆ ಸೇರುವುದಾಗಿ ಎಎಪಿ ಈ ಹಿಂದೆ ಹೇಳಿತ್ತು.
2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ಜಂಟಿ ಕಾರ್ಯತಂತ್ರವನ್ನು ರೂಪಿಸಲು ನಡೆಯುತ್ತಿರುವ ವಿಪಕ್ಷಗಳ ಎರಡನೇ ಸಭೆ ಇದಾಗಿದೆ. ಈ ಬಾರಿ 24 ವಿಪಕ್ಷಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ
ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಿದ್ದರು.