ದೇಶ

ಐಎಸ್ಐಎಸ್ ಜೊತೆಗೆ ಸಂಪರ್ಕ ಹೊಂದಿದ್ದ ಎಎಂಯು ವಿದ್ಯಾರ್ಥಿಯನ್ನು ಬಂಧಿಸಿದ ಎನ್ಐಎ

Srinivas Rao BV

ನವದೆಹಲಿ: ಅಲೀಘರ್ ಮುಸ್ಲಿಂ ವಿವಿಯಲ್ಲಿನ 19 ವರ್ಷದ ವಿದ್ಯಾರ್ಥಿಯೊಬ್ಬನನ್ನು ಉಗ್ರ ಸಂಘಟನೆ ಐಎಸ್ಐಎಸ್ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದಡಿಯಲ್ಲಿ ಎನ್ಐಎ ಬಂಧಿಸಿದೆ. 

ಜಾರ್ಖಂಡ್ ನಲ್ಲಿರುವ ಆತನ ಮನೆ ಹಾಗೂ ಉತ್ತರ ಪ್ರದೇಶದಲ್ಲಿದ್ದ ಬಾಡಿಗೆ ಮನೆಯ ತಪಾಸಣೆಯ ಬಳಿಕ ಆತನನ್ನು ಬಂಧಿಸಲಾಗಿದೆ. 

ಬಂಧಿತ ವ್ಯಕ್ತಿಯನ್ನು ಫೈಜಾನ್ ಅನ್ಸಾರಿ ಅಲಿಯಾಸ್ ಫೈಜ್ ಎಂದು ಗುರುತಿಸಲಾಗಿದ್ದು, ದೇಶಾದ್ಯಂತ ಐಎಸ್ಐಎಸ್ ಮಾಡ್ಯೂಲ್‌ಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಎಎಂಯು ನ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಜು.16, 17 ರಂದು ಅನ್ಸಾರಿ ಮನೆಯಲ್ಲಿ ತಪಾಸಣೆ ಕೈಗೊಳ್ಳಲಾಗಿತ್ತು. ಆ ವೇಳೆ ಅಲ್ಲಿಂದ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ದೋಷಾರೋಪಣೆಗೆ ಪೂರಕವಾಗುವಂತಹ ವಸ್ತು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಬೆಂಬಲಿಸಲು ಮತ್ತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂಘಟನೆಯ ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಅನ್ಸಾರಿ ತನ್ನ ಸಹಚರರು ಮತ್ತು ಇತರ ಅಪರಿಚಿತ ವ್ಯಕ್ತಿಗಳೊಂದಿಗೆ ಸೇರಿ ISIS ಪರವಾಗಿ ಕ್ರಿಮಿನಲ್ ಸಂಚು ರೂಪಿಸಿದ್ದ ಎಂದು ವಕ್ತಾರರು ಹೇಳಿದ್ದಾರೆ. 

ಅನ್ಸಾರಿ ಮತ್ತು ಅವರ ಸಹಚರರು ಇಸ್ಲಾಮಿಕ್ ಸ್ಟೇಟ್ ಎಂದೂ ಕರೆಯಲ್ಪಡುವ ಐಸಿಸ್‌ಗೆ ತಮ್ಮ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT